

ಮೈಸೂರು: ಯಶೋದರಾ ದಾಸಪ್ಪ ಅವರು ಮದ್ಯಪಾನ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ತ್ಯಾಗಮಯಿ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಹೇಳಿದರು.
ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಯನಗರದ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಯಶೋದರಾ ದಾಸಪ್ಪ ಅವರ 120ನೇ ಜನ್ಮದಿನಾಚರಣೆ, ಎಸ್.ಪ್ರಕಾಶ್‌ಬಾಬು ಅವರ ‘ಕರ್ನಾಟಕದ ಮೊದಲ ಮಹಿಳಾ ಮಂತ್ರಿ, ಉಕ್ಕಿನ ಮಹಿಳೆ ಯಶೋದರಾ ದಾಸಪ್ಪ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಶೋದರಾ ಅವರು ದೊಡ್ಡ ತ್ಯಾಗ ಮಾಡಿದವರು. ಮದ್ಯಪಾನ ಕಾಯ್ದೆಯನ್ನು ಸಡಿಲಗೊಳಿಸಲು ನಿಜಲಿಂಗಪ್ಪ ನೇತೃತ್ವದ ರಾಜ್ಯ ಸರ್ಕಾರ ಮುಂದಾಯಿತು. ಆದರೆ, ಇವರು ಈ ಕ್ರಮವನ್ನು ಬಲವಾಗಿ ವಿರೋಧಿಸಿದರು. ಅಷ್ಟೇ ಅಲ್ಲ, ಮದ್ಯಪಾನ ನಿಷೇಧ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ರಾಜೀನಾಮೆ ಕೊಟ್ಟು ಸಚಿವ ಸಂಪುಟದಿಂದ ಹೊರ ಬಂದರು ಎಂದರು.
ಈಗ ತ್ಯಾಗ ಎಂದರೇನು ಕೇಳುವ ಕಾಲದಲ್ಲಿ ಇದ್ದೇವೆ. ಪ್ರಸಕ್ತ ರಾಜಕಾರಣಿಗಳಿಂದ ಇಂತಹ ಗಟ್ಟಿ ನಿರ್ಧಾರವನ್ನು ನಿರೀಕ್ಷಿಸಲು ಆಗಲ್ಲ. ಸ್ವಾರ್ಥ ರಾಜಕಾರಣವೇ ಇದೀಗ ವಿಜೃಂಭಿಸುತ್ತಿದೆ. ಯಶೋದರಾ ಅವರಂಥ ರಾಜಕಾರಣಿಗಳು ಸಿಗುವುದು ತೀರ ವಿರಳ. ಹೀಗಾಗಿಯೇ ಅವರು ಶ್ರೇಷ್ಠ ಮಹಿಳೆ, ಉಕ್ಕಿನ ಮಹಿಳೆ ಮತ್ತು ಸೀಮಾತೀತ ಸ್ತ್ರೀ ಎಂದರು.
1938ರಲ್ಲಿ ನಡೆದ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾತಂತ್ರೃ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಈ ರೀತಿ ಜನಪರ, ದೇಶಕ್ಕಾಗಿ ಹೋರಾಟ ಮಾಡುವವರು ಈಗ ಸಿಗುವುದಿಲ್ಲ. ಈಗಿನ ರಾಜಕೀಯ ಸಂಪೂರ್ಣವಾಗಿ ಕಲುಷಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲೂ ಅವರು ಸಾಧನೆ ಮಾಡಿದರು. ಮೌಲ್ಯಯುತ ರಾಜಕಾರಣ ಮಾಡಿದ ಅವರು, ಸ್ತ್ರೀಕುಲಕ್ಕೆ ಸ್ಫೂರ್ತಿ ಸೆಲೆ. ಹೀಗಾಗಿ, ಕೇವಲ ಪುರುಷರ ಜೀವನ ಚರಿತ್ರೆಗಿಂತ ಇಂತಹ ಮಹಿಳಾ ಸಾಧಕಿಯರ ಜೀವನ ಚರಿತ್ರೆಯನ್ನೂ ಓದಬೇಕು ಎಂದು ಸಲಹೆ ನೀಡಿದರು.
2024ನೇ ಸಾಲಿನ ‘ಯಶೋದರಾ ದಾಸಪ್ಪ ಸೇವಾ ಪ್ರಶಸ್ತಿ’ಯನ್ನು ವೈದ್ಯೆ ಡಾ.ಶ್ವೇತಾ ಸದಾನಂದ್ ಅವರಿಗೆ ಪ್ರದಾನ ಮಾಡಲಾಯಿತು. ವಿಧಾನಪರಿಷತ್‌ನ ನೂತನ ಸದಸ್ಯ ಕೆ.ವಿವೇಕಾನಂದ ಅವರನ್ನು ಸನ್ಮಾನಿಸಲಾಯಿತು.
ಐಪಿಎಸ್ ಅಧಿಕಾರಿ ಎ.ಎನ್.ಪ್ರಕಾಶ್‌ಗೌಡ, ಸಂಘದ ಅಧ್ಯಕ್ಷೆ ಶೋಭಾ ರಮೇಶ್, ನೇಗಿಲಯೋಗಿ ಸಂಸ್ಥೆ ಅಧ್ಯಕ್ಷ ಡಿ.ರವಿಕುಮಾರ್, ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜಾ ತುಳಸಿದಾಸ್, ಕೃತಿ ಲೇಖಕ ಎಸ್.ಪ್ರಕಾಶ್‌ಬಾಬು ಇನ್ನಿತರರಿದ್ದರು.