

ಮಂಡ್ಯ: ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಸಹಕಾರಿಗಳು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಡಿ.31 ಕೊನೆಯ ದಿನವಾಗಿದೆ. 2023 ಜ.1ರಿಂದ ಯೋಜನೆ ಅನುಷ್ಠಾನಗೊಳ್ಳಲಿದೆ. ಆದ್ದರಿಂದ ಕೂಡಲೇ ನೋಂದಾಯಿಸಿಕೊಳ್ಳುವಂತೆ ಸಹಕಾರ ಇಲಾಖೆ ಉಪನಿಬಂಧಕ ವಿಕ್ರಮರಾಜೇ ಅರಸ್ ಹೇಳಿದರು.
ಎಲ್ಲ ವಿಧದ ಸಹಕಾರ ಸಂಘ, ಸಹಕಾರ ಬ್ಯಾಂಕು, ಸೌಹಾರ್ಧ ಸಹಕಾರಿ, ಡೇರಿ ಹಾಗೂ ಸೊಸೈಟಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ವ್ಯವಹರಿಸುತ್ತಿರುವ ಸದಸ್ಯರು ಮತ್ತು ಅವರ ಕುಟುಂಬದವರು ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ಅಂತೆಯೇ ಸಂಘದ ಸದಸ್ಯತ್ವ ಪಡೆದು ಮೂರು ತಿಂಗಳಾಗಿರಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮೀಣ ಸಹಕಾರ ಸಂಘದ ಸದಸ್ಯರಿಗೆ(ಒಟ್ಟು ನಾಲ್ಕು ಜನರಿಗೆ) 500 ರೂ ಹಾಗೂ ಹೆಚ್ಚುವರಿ ಸದಸ್ಯರಿಗೆ ತಲಾ 100 ರೂ, ನಗರ ಸಹಕಾರ ಸಂಘದ ಸದಸ್ಯರಿಗೆ(ಒಟ್ಟು ನಾಲ್ಕು ಜನರಿಗೆ) ಒಂದು ಸಾವಿರ ರೂ ಹಾಗೂ ಹೆಚ್ಚುವರಿಗೆ ಸದಸ್ಯರಿಗೆ ತಲಾ 200 ರೂ ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಗಿರಿಜನರಿಗೆ ನೋಂದಣಿ ಶುಲ್ಕ ಉಚಿತವಾಗಿದೆ. ಪ್ರಮುಖವಾಗಿ ಯಾವುದೇ ವಯಸ್ಸಿನ ಮಿತಿ ಇಲ್ಲ. ಯೋಜನೆಯ ಅವಧಿ ಒಂದು ವರ್ಷವಿರಲಿದೆ ಎಂದು ವಿವರಿಸಿದರು.
ನೋಂದಣಿ ಮಾಡಿಕೊಂಡ ಪ್ರತಿ ಕುಟುಂಬದ ಸದಸ್ಯರಿಗೂ ಯೂನಿಕ್ ಕಾರ್ಡ್ ಕೊಡಲಾಗುವುದು. ಅಂತೆಯೇ ಕುಟುಂಬಕ್ಕೆ ವಾರ್ಷಿಕ ಐದು ಲಕ್ಷ ರೂವರೆಗೆ ಶಸ್ತ್ರ ಚಿಕಿತ್ಸಾ ವೆಚ್ಚವನ್ನು ನೀಡಲಾಗುತ್ತದೆ. ಸುಮಾರು 1,650 ರೋಗಗಳಿಗೆ ಚಿಕಿತ್ಸೆ ಪಡೆಯಬಹುದು. ಮಂಡ್ಯ ಜಿಲ್ಲೆಯಲ್ಲಿ 22 ಆಸ್ಪತ್ರೆಗಳಲ್ಲಿ ಸೇವೆ ಪಡೆಯಬಹುದು. ಪ್ಯಾಕೇಜ್ ರೀತಿಯಲ್ಲಿ ನಗದು ರಹಿತ ಸೌಲಭ್ಯವಿರಲಿದೆ. ಜಿಲ್ಲೆಗೆ 1,50 ಲಕ್ಷ ಜನರನ್ನು ನೋಂದಣಿ ಮಾಡಿಕೊಳ್ಳುವ ಗುರಿ ಇದ್ದು, ಪ್ರಸ್ತುತ 52000 ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಮಾಹಿತಿಗೆ ಜ್ಲಿ ಸಹಕಾರ ಸಂಘಗಳ ಉಪನಿಬಂಧಕರು, ಸಹಾಯಕ ನಿಬಂಧಕರನ್ನು ಸಂಪರ್ಕಿಸಬಹುದೆಂದು ವಿಕ್ರಮರಾಜೇ ಅರಸ್ ಮನವಿ ಮಾಡಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ಕೆ.ಸುಂದ್ರಪ್ಪ, ಇಲಾಖೆಯ ನಾಗಭೂಷಣ್, ಮುಕ್ತಾ, ಪುಟ್ಟಸ್ವಾಮಿ, ಪ್ರಮೋದ್ ಇತರರಿದ್ದರು.