ಅರಣ್ಯ ಭವನ ಆವರಣದಲ್ಲಿ ಗಜಪಡೆ ವಿಶ್ರಾಂತಿ

14
Published on

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮೊದಲ ತಂಡದ ಗಜಪಡೆ ಅರಣ್ಯಭವನದ ಆವರಣದಲ್ಲಿ ಠಿಕಾಣಿ ಹೂಡಿದ್ದು, ರಿಲ್ಯಾಕ್ಸ್ ಮೂಡಿಗೆ ಜಾರಿದ್ದವು. ಹಸಿಹುಲ್ಲು, ಒಣಹುಲ್ಲು, ಕಬ್ಬು, ಬೆಲ್ಲ, ಭತ್ತ, ತೆಂಗಿನಕಾಯಿ, ಆಲದ ಎಲೆ ತಿಂದು ವಿಶ್ರಾಂತಿ ಪಡೆದವು.

ಶುಕ್ರವಾರವಷ್ಟೇ ಗಜಪಯಣ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಲಾರಿಯಲ್ಲಿ ಬಂದ ಆನೆಗಳು ನಗರದ ಅರಣ್ಯಭವನದಲ್ಲಿ ವಾಸ್ತವ್ಯ ಹೂಡಿವೆ. ಬಹುದೂರದಿಂದ ಪ್ರಯಾಣ ಮಾಡಿದ್ದ ಆನೆಗಳು ಯಾವುದೇ ತಾಲೀಮಿನ ಗೊಡವೆ ಇಲ್ಲದೆ ರಿಲ್ಯಾಕ್ಸ್ ಆದವು. ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಕೂಡ ವಿಶ್ರಾಂತಿ ಪಡೆದರು. ಡಿಸಿಎಫ್ ಸೌರಭ್‌ಕುಮಾರ್ ನೇತೃತ್ವದಲ್ಲಿ ಅರಣ್ಯಇಲಾಖೆ ಅಧಿಕಾರಿಗಳು ಆನೆಗಳ ಆರೋಗ್ಯ, ಚಲನದ ಮೇಲೆ ನಿಗಾವಹಿಸಿದ್ದರು. 9 ಆನೆಗಳನ್ನು ಒಂದೊಂದು ಕಡೆ ಇರಿಸಲಾಗಿದೆ.


ವಿಶ್ರಾಂತಿ ಪಡೆದ ಕ್ಯಾಪ್ಟನ್ ಅಭಿಮನ್ಯು!

ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ಆನೆಯನ್ನು ಅರಣ್ಯಭವನದ ಮೂಲೆಯಲ್ಲಿ ಇರಿಸಲಾಗಿದ್ದು, ಪಕ್ಕದಲ್ಲೇ ಹೆಣ್ಣಾನೆಗಳಾದ ವರಲಕ್ಷ್ಮೀ ಹಾಗೂ ವಿಜಯ ಆನೆಗಳನ್ನು ಒಂದೊಂದು ಕಡೆ ಕಟ್ಟಲಾಗಿತ್ತು. ಮಾಜಿ ಕ್ಯಾಪ್ಟನ್ ಅರ್ಜುನ ಆವರಣದ ಕ್ವಾಟ್ರರ್ಸ್ ಬಳಿಯ ಜಾಗದಲ್ಲಿ ಏಕಾಂಗಿಯಾಗಿ ವಿಶ್ರಾಂತಿ ಪಡೆದರೆ, ಧನಂಜಯ, ಗೋಪಿ ಒಂದು ಕಡೆ, ಮತ್ತೊಂದು ಕಡೆ ಮಹೇಂದ್ರ, ಭೀಮ ಆನೆ ವಿಶ್ರಾಂತಿಗೆ ಜಾರಿದವು. ದುಬಾರೆ ಶಿಬಿರದ ಹೊಸ ಅತಿಥಿ ಕಂಜನ್‌ನನ್ನು ಪ್ರತ್ಯೇಕವಾಗಿ ಕಟ್ಟಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net