

ಗೋಣಿಕೊಪ್ಪಲು: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯಡಿಯಲ್ಲಿ ಬುಡಕಟ್ಟು ಸಮುದಾಯಗಳು ವಾಸಿಸುತ್ತಿರುವ ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಲಾಯಿತು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಿರಸುಳಿ ಹಾಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳ ನಾಮಫಲಕಗಳನ್ನು ಸಂಸದ ಯದುವೀರ್ ಹಾಗೂ ಶಾಸಕ ಪೊನ್ನಣ್ಣ ಅವರು ಅನಾವರಣಗೊಳಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಬುಡಕಟ್ಟು ಸಮುದಾಯ ವಾಸವಿರುವ ಸ್ಥಳಗಳನ್ನು ಗುರುತಿಸಿ ರಸ್ತೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕೇಂದ್ರ ಸರ್ಕಾರದ ಶೇ. 60ರಷ್ಟು ಮತ್ತು ರಾಜ್ಯ ಸರ್ಕಾರದ ಶೇ.40 ರಷ್ಟು ಅನುದಾನದಲ್ಲಿ ಅತಿಸೂಕ್ಷ್ಮ ಬುಡಕಟ್ಟು ಸಮುದಾಯಗಳು ವಾಸವಿರುವ ಹಾಡಿಗಳಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ 12 ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅತಿಸೂಕ್ಷ್ಮ ಬುಡಕಟ್ಟು ಸಮುದಾಯಗಳು ವಾಸಿಸುತ್ತಿದ್ದು, ಅದರಲ್ಲೂ ಯರವ ಜನಾಂಗವನ್ನು ಅತಿಸೂಕ್ಷ್ಮ ಬುಡಕಟ್ಟು ಸಮುದಾಯಕ್ಕೆ ಸೇರಿಸುವಂತೆ ನಾನು ಪತ್ರದ ಮುಖೇನ ರಾಜ್ಯ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಹೇಳಿದ ಪೊನ್ನಣ್ಣ ಅವರು, ಸಮಾಜದ ಮುಖ್ಯವಾಹಿನಿಯಿಂದ ಹಿಂದುಳಿದಿರುವ ದೊಡ್ಡವರ್ಗವಾಗಿರುವ ಶೋಷಿತ ವರ್ಗವನ್ನು ಮೇಲೆತ್ತುವ ಕೆಲಸವನ್ನು ಎಲ್ಲರೂ ಮಾಡಬೇಕೆಂದು ಸಲಹೆ ನೀಡಿದರು.
ಸಂಸದ ಯದುವೀರ್ ಮಾತನಾಡಿ, ಪ್ರಧಾನ ಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಶೇ.60 ರಷ್ಟು ಮತ್ತು ರಾಜ್ಯ ಸರ್ಕಾರದ ಶೇ.40 ರಷ್ಟು ಅನುದಾನದಲ್ಲಿ ಬುಡಕಟ್ಟು ಸಮುದಾಯಗಳು ವಾಸಿಸುತ್ತಿರುವ ಸ್ಥಳಗಳಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿರುವ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಿಗೂ ತಲುಪಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬುಡಕಟ್ಟು ಸಮುದಾಯ ತಯಾರಿಸುವ ಅರಣ್ಯ ಉತ್ಪನ್ನಗಳಿಗೆ ವಿಶೇಷ ಕೇಂದ್ರ ರಚನೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ, ಸೇರಿದಂತೆ ಸುಮಾರು 15 ಸಾವಿರ ಕೋಟಿ ರೂ.ಗಳ ಅನುದಾನವನ್ನು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮೀಸಲಿಟ್ಟಿದ್ದು, ವಿಕಸಿತ ಭಾರತ ನಿರ್ಮಾಣವೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಲಾಲಾ ಅಪ್ಪಣ್ಣ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೊನ್ನು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಂಕಜಾ, ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಪ್ಪಣಮಾಡ ನಿವ್ಯಾ ಕಾವೇರಮ್ಮ, ಕೆ.ಬಾಬು, ಮಾಚಿಮಾಡ ರವೀಂದ್ರ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.