

ಜಿ.ನಾಗರಾಜ್ ಬೂದಿಕೋಟೆ
ಕೋಲಾರ ಜಿಲ್ಲೆಯ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯರಗೊಳ್ ಡ್ಯಾಂ ಕಾಮಗಾರಿ ಆರಂಭಿಸಿ ಸುಮಾರು 14 ವರ್ಷ ಕಳೆದರೂ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದ್ದು, ಲೋಕಾರ್ಪಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಬೂದಿಕೋಟೆ ಹೋಬಳಿಯ ಬಲಮಂದೆ ಪಂಚಾಯಿತಿ ವ್ಯಾಪ್ತಿಯ ಯರಗೊಳ್ ಗ್ರಾಮದ ಬಳಿ ಈ ಯೋಜನೆಗೆ 2006ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿಯ ಗುತ್ತಿಗೆಯನ್ನು ಹೈದರಾಬಾದ್ ಮೂಲದ ರಾಮ್ಕಿ ಸಂಸ್ಥೆ ಪಡೆದಿದ್ದು, ಕಾಮಗಾರಿ ಪ್ರಾರಂಭಿಸಿ 14 ವರ್ಷಗಳೇ ಕಳೆದಿದ್ದು, ಇನ್ನೂ ಕುಂಟುತ್ತಾ ಸಾಗುತ್ತಿದೆ.
ವೇಗ ಹೆಚ್ಚಿಸಲು ಪ್ರಯತ್ನ: ಹಲವು ಬಾರಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಸಂಸದ ಮುನಿಸ್ವಾಮಿ, ಶಾಸಕರಾದ ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ ಸೇರಿ ಹಲವರು ಭೇಟಿ ನೀಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ 2020 ಜನವರಿ 1ಕ್ಕೆ ಲೋಕಾರ್ಪಣೆ ದಿನಾಂಕ ನಿಗದಿ ಮಾಡಿದ್ದರು. ಈ ದಿನಾಂಕ ಮುಗಿದು 6 ತಿಂಗಳಾಗುತ್ತಿದ್ದು, ಕಾಮಗಾರಿ ಮಾತ್ರ ವೇಗ ಪಡೆಯುತ್ತಿಲ್ಲ.
ಬಾಕಿ ಕಾಮಗಾರಿ: ಅಣೆಕಟ್ಟಿನ ಮೇಲ್ಭಾಗದ ರಸ್ತೆಯ ಕಾಮಗಾರಿ, ಜಾಕ್‌ವೆಲ್ ನಿರ್ಮಾಣ ಕಾರ್ಯ, ಮುಖ್ಯರಸ್ತೆಯಿಂದ ಡ್ಯಾಂವರೆಗಿನ ರಸ್ತೆ ಡಾಂಬರು ಸೇರಿ ಇತರ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎರಡು-ಮೂರು ತಿಂಗಳಾಗಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಡ್ಯಾಂ ಸಾಮರ್ಥ್ಯ: 500 ಎಂಸಿಎಫ್‌ಟಿ ಸಾಮರ್ಥ್ಯದ ಯರಗೊಳ್ ಡ್ಯಾಂ ನಿರ್ಮಾಣಕ್ಕೆ ರೈತರಿಂದ 95 ಎಕರೆ, ಅರಣ್ಯ ಇಲಾಖೆಯಿಂದ 154 ಎಕರೆ ಮತ್ತು ಸರ್ಕಾರಿ ಭೂ ಪ್ರದೇಶದ 126 ಎಕರೆ ಜಮೀನು ಸೇರಿ ಒಟ್ಟು 375 ಎಕರೆ ಭೂ ಪ್ರದೇಶ ವಶಪಡಿಸಿಕೊಳ್ಳಲಾಗಿದೆ. ಮಾಕರ್ಂಡೇಯ ನದಿಗೆ ಅಡ್ಡಲಾಗಿ ಎರಡು ಬೆಟ್ಟಗಳ ಮಧ್ಯೆ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದ್ದು, 414 ಮೀಟರ್ ಉದ್ದ, 30 ಮೀಟರ್ ಎತ್ತರ ಅಣೆಕಟ್ಟು ನಿರ್ಮಾಣ ಕಾರ್ಯ ಮುಗಿಯುವ ಹಂತ ತಲುಪಿದೆ.
ಡ್ಯಾಂ ಪೂರ್ಣಗೊಂಡರೆ 8 ಟಿಎಂಸಿ ನೀರು ಸಂಗ್ರಹಣೆ ಮಾಡಬಹುದಾಗಿದ್ದು, ಕೋಲಾರ, ಮಾಲೂರು, ಬಂಗಾರಪೇಟೆ ತಾಲೂಕಿನ ಒಟ್ಟು 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಸುಮಾರು 5-6 ಅಡಿ ನೀರು ಡ್ಯಾಂನಲ್ಲಿ ಶೇಖರಣೆಯಾಗಿದೆ.
ಇದು ಕುಡಿಯುವ ನೀರಿನ ಯೋಜನೆಯಾಗಿದ್ದು, ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಶೀಘ್ರ ಮುಗಿಸುವಂತೆ ಗುತ್ತಿಗೆದಾರರ ಗಮನಕ್ಕೆ ತಂದು ಇನ್ನೆರಡು ತಿಂಗಳಲ್ಲಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು. ಮತ್ತು ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಶ್ರೀನಿವಾಸಗೌಡ, ಶಾಸಕ, ಕೋಲಾರ