

ಕೋಲಾರ: ಜಿಲ್ಲೆಯ ಕುಡಿಯುವ ನೀರಿನ ಯರಗೋಳ್ ಯೋಜನೆಯನ್ನು 2021ರ ಜನವರಿ 27ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿ, ಬಹು ನಿರೀಕ್ಷಿತ ಯೋಜನೆಗೆ ಚಾಲನೆ ನೀಡುವ ದಿನಾಂಕವನ್ನು ಮುಖ್ಯಮಂತ್ರಿಗಳೇ ನಿಗದಿ ಮಾಡಿದ್ದಾರೆ. ಯೋಜನೆ ಜಾರಿಯಿಂದ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ ಎಂದರು.
ಪತ್ರಕರ್ತರಿಗೆ ನಿವೇಶನ ಕಲ್ಪಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ಅಷ್ಟರೊಳಗೆ ಜಿಲ್ಲಾಧಿಕಾರಿಗಳು ನಗರದ ಸುತ್ತಮುತ್ತ ಅಗತ್ಯವಿರುವ 10 ಎಕರೆ ಜಮೀನು ಗುರುತಿಸಿಕೊಟ್ಟಲ್ಲಿ ಮುಖ್ಯಮಂತ್ರಿಗಳಿಂದ ಹಸ್ತಾಂತರಿಸಲು ಕ್ರಮವಹಿಸಲಾಗುವುದು, ಕರೊನಾ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ನಗರದ ರಸ್ತೆಗಳು ಹಳ್ಳ ಬಿದ್ದು ಸಂಚಾರಕ್ಕೆ ಕಷ್ಟವಾಗುತ್ತಿರುವುದರಿಂದ ನಗರಸಭೆ ಮೂಲಕ ಹಳ್ಳ ಮುಚ್ಚಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಡಿಸಿ ಸಿ.ಸತ್ಯಭಾಮ ಮಾತನಾಡಿ, ಸರ್ಕಾರದ ಚೌಕಟ್ಟಿನಲ್ಲಿ ಪತ್ರಕರ್ತರಿಗೆ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಕರೊನಾ ಸಂಕಷ್ಟದ ನಡುವೆ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರನ್ನು ಸರ್ಕಾರ ಗುರುತಿಸಿಲ್ಲ. ಅಗತ್ಯವಿರುವವರಿಗೆ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಶಾಸಕರ ಅನುದಾನದಲ್ಲಿ ಪತ್ರಕರ್ತರ ಸಂಘಕ್ಕೆ 10 ಲಕ್ಷ ರೂ. ನೀಡುವ ಜತೆಗೆ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆ ತೊಂದರೆ ಇದ್ದರೆ ಸಹಕಾರ ನೀಡಲಾಗುವುದು ಎಂದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸಂಘಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಆರ್ ಮನೋಹರ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಮಹಮದ್ ಯೂನಸ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ, ಜಿಪಂ ಸಿಇಒ ಎಚ್.ವಿ. ದರ್ಶನ್, ಎಎಸ್ಪಿ ಜಾಹ್ನವಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಸುರೇಶ್‌ಕುಮಾರ್ ಇತರರಿದ್ದರು.
ವಿಜಯವಾಣಿ ಹಿರಿಯ ವರದಿಗಾರ ಪಾ.ಶ್ರೀ.ಅನಂತರಾಮ್, ಪತ್ರಕರ್ತರಾದ ತೇ.ಸಿ.ಬದರಿನಾಥ್, ರಾಜೇಂದ್ರ ವೈದ್ಯ, ಜೆ.ಸತ್ಯರಾಜ್, ಟಿ.ನಾರಾಯಣಸ್ವಾಮಿ, ಕೆ.ತ್ಯಾಗರಾಜಪ್ಪ,ಎಚ್.ಆರ್.ಮದನ್‌ಕುಮಾರ್, ಎನ್.ಆರ್. ಪುರುಷೋತ್ತಮ್, ಸೈಯದ್ ತಬ್ರೇಜ್ ಅವರನ್ನು ಸನ್ಮಾನಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಕರಪತ್ರ ಮುದ್ರಿಸಿ ಹಂಚುವ ಬದಲು ಅದೇ ವಿಷಯವನ್ನು ಪತ್ರಿಕೆಗಳಿಗೆ ಜಾಹೀರಾತು ರೂಪದಲ್ಲಿ ನೀಡುವುದರಿಂದ ಜನರನ್ನು ತಲುಪಬಹುದು, ಪತ್ರಿಕೆಗಳಿಗೂ ಅನುಕೂಲವಾಗುತ್ತದೆ. ಪತ್ರಕರ್ತರ ಸಂಘದ ಚಟುವಟಿಕೆಗೆ 10 ಲಕ್ಷ ರೂ. ನೀಡಿದ್ದು, ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ಇನ್ನೂ 10 ಲಕ್ಷ ರೂ. ನೀಡಲು ಸಿದ್ಧ. ಎಸ್.ಮುನಿಸ್ವಾಮಿ, ಸಂಸದ