

ಜಿ.ನಾಗರಾಜ್ ಬೂದಿಕೋಟೆ
ಕೋಲಾರ ಜಿಲ್ಲೆಯ ಬಹು ನಿರೀಕ್ಷಿತ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸುತ್ತಿರುವ ಯರಗೋಳ್ ಅಣೆಕಟ್ಟೆ ಕಾಮಗಾರಿ 13 ವರ್ಷಗಳ ನಂತರ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಡ್ಯಾಂನಲ್ಲಿ ಮಾತ್ರ ಒಂದೇ ಒಂದು ಹನಿ ನೀರಿಲ್ಲ.
ಬಂಗಾರಪೇಟೆ, ಕೋಲಾರ, ಮಾಲೂರು ತಾಲೂಕಿನ 45 ಗ್ರಾಮಗಳಿಗೆ ನೀರು ಪೂರೈಸಬೇಕಿದೆ. ಈ ಯೋಜನೆಗೆ 2006ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೋಲಾರ ವಿಭಾಗದ ಮೇಲ್ವಿಚಾರಣೆಯಲ್ಲಿ ಆಂಧ್ರ ಮೂಲದ ರಾಮ್ಕಿ ಕಂಪನಿ ಇದನ್ನು ನಿರ್ಮಿಸಿದೆ. 24 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ 13 ವರ್ಷಗಳ ಬಳಿಕ ಪೂರ್ಣಗೊಂಡಿದೆ.
314 ಕೋಟಿ ರೂ. ವೆಚ್ಚ: ಕಾಮಗಾರಿಗೆ 2008ರಲ್ಲಿ ಚಾಲನೆ ನೀಡಿದಾಗ ಅಂದಾಜು 160 ಕೋಟಿ ರೂ. ಯೋಜನಾ ವೆಚ್ಚ ನಿಗದಿಯಾಗಿತ್ತು. ಆದರೆ, ಇದನ್ನು 240 ಕೋಟಿ ರೂಪಾಯಿಗೆ ಪರಿಷ್ಕರಿಸಿ, ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಮುಗಿಯುವ ವೇಳೆಗೆ ಯೋಜನಾ ವೆಚ್ಚ 314 ಕೋಟಿ ರೂ. ತಲುಪಿತ್ತು. ಧರಂಸಿಂಗ್ ಸರ್ಕಾರದ ಅವಧಿಯಲ್ಲಿ ಆರಂಭವಾದ ಯೋಜನೆ ಹಲವು ಏಳು-ಬೀಳುಗಳ ನಡುವೆ 13 ವರ್ಷಗಳ ಬಳಿಕ ಲೋಕಾರ್ಪಣೆಗೆ ಸಿದ್ಧವಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲು ತಡವಾಗಿದ್ದರಿಂದ ಸರ್ಕಾರ, ರಾಮ್ಕಿ ಕಂಪನಿಗೆ 1.53 ಕೋಟಿ ರೂ.ದಂಡ ವಿಧಿಸಿದೆ.
ಆಮೆಗತಿ ಕಾಮಗಾರಿಗೆ ವೇಗ: ಆಮೆಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಸ್ಥಳಕ್ಕೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಕೋಲಾರ ಶಾಸಕ ಶ್ರೀನಿವಾಸಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ ಸೇರಿ ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರ ಲವಾಗಿ ಕಾಮಗಾರಿ ಪೂರ್ಣಗೊಳ್ಳಲು ಮತ್ತೊಂದು ಕಾರಣವಾಗಿದೆ.
ಮಳೆ ಬಂದರಷ್ಟೇ ನೀರು: ಯುರಗೋಳ್ ಅಣೆಕಟ್ಟೆ ಯೋಜನೆ ಮಳೆಯಾಶ್ರಿತ ಯೋಜನೆಯಾಗಿದೆ. ಮಳೆ ಬಂದು ಮಾರ್ಕಂಡೇಯ ಅಣೆಕಟ್ಟೆ ತುಂಬಿ ಕೋಡಿ ಬಿದ್ದರೆ ಯರಗೋಳ್ ಡ್ಯಾಂಗೆ ನೀರು ಬರುತ್ತದೆ ಹಾಗೂ ಜಿಲ್ಲೆಯ ಜನತೆಯ ಕುಡಿಯುವ ನೀರಿನ ಹಾಹಾಕಾರ ತಪ್ಪಲಿದೆ. ಸಮರ್ಪಕವಾಗಿ ಮಳೆಯಾಗದಿದ್ದಲ್ಲಿ ಅಣೆಕಟ್ಟೆ ನಿರ್ಮಾಣದ ಉದ್ದೇಶವೇ ವ್ಯರ್ಥವಾಗುತ್ತದೆ.
ತುಂಬುವುದೇ ಅಣೆಕಟ್ಟೆ: ಮಳೆಯಾಗಿ ಡ್ಯಾಂ ತುಂಬವಷ್ಟು ನೀರು ಬರುತ್ತದೆಯೇ ಎಂಬ ಅನುಮಾನ ಆರಂಭವಾಗಿದೆ. ಈ ಯೋಜನೆಗೆ ಚಾಲನೆ ನೀಡಿದಾಗ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾಗುತ್ತಿತ್ತು. ಆದರೆ ಕಳೆದ 15 ವರ್ಷಗಳಿಂದ ಜಿಲ್ಲೆಯಲ್ಲಿ ವಾಡಿಕೆಯ ಪ್ರಮಾಣದ ಮಳೆಯೂ ಆಗದಿರುವುದರಿಂದ, ಬರದ ಛಾಯೆ ಆವರಿಸಿದೆ. ಹೀಗಿರುವಾಗ ಈ ಯೋಜನೆಯಿಂದ ಜನರಿಗೆ ಉಪಯೋಗ ಆಗುತ್ತದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಮುಂದೆ ಹೋಗುತ್ತಿದೆ ಲೋಕಾರ್ಪಣೆ ದಿನ: ಡ್ಯಾಂ ಲೋಕಾರ್ಪಣೆೆಗೆ ಎರಡು ವರ್ಷಗಳಿಂದಲೂ ಒಂದಿಲ್ಲೊಂದು ಮುಹೂರ್ತ ನಿಗದಿಪಡಿಸಲಾಗುತ್ತಿದೆ. ಆದರೆ, ಕಾಮಗಾರಿ ಪೂರ್ಣವಾಗದೆ, ಮುಂದೂಡಿಕೆ ಆಗುತ್ತಲೇ ಇದೆ. ಇದೀಗ ಜ.27ಕ್ಕೆ (ಬುಧವಾರ) ಉದ್ಘಾಟನೆಯ ಮುಹೂರ್ತ ನಿಗದಿಯಾಗಿತ್ತಾದರೂ, ಅದೂ ಮುಂದಕ್ಕೆ ಹೋಗಿದೆ. ಡ್ಯಾಂನಲ್ಲಿ ನೀರು ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಕೆಸಿ ವ್ಯಾಲಿ ನೀರು ಹರಿಯಲ್ಲ: ಕೆಸಿ ವ್ಯಾಲಿ ನೀರನ್ನು ಮಾರ್ಕಾಂಡೇಯ ಡ್ಯಾಂಗೆ ಹರಿಸಿ, ಅಲ್ಲಿಂದ ಯುರಗೋಳ್‌ಗೆ ಹರಿಸುವ ಚಿಂತನೆ ನಡೆದಿತ್ತು. ಆದರೆ, ಮಾರ್ಕಾಂಡೇಯ ಡ್ಯಾಂನಿಂದ ತಾಲೂಕಿನ 184 ಹಳ್ಳಿಗಳಿಗೆ ಕುಡಿವ ನೀರು ಸರಬರಾಜು ಮಾಡುವ ಉದ್ದೇಶದೊಂದಿಗೆ 40 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಗೊಂಡಿದೆ. ಕೆಸಿ ವ್ಯಾಲಿ ನೀರು ಮಾರ್ಕಾಂಡೇಯ ಡ್ಯಾಂಗೆ ಹರಿದರೆ ನೀರು ಕಲುಷಿತವಾಗುತ್ತದೆ. ಆದ್ದರಿಂದ, ಈ ಅಣೆಕಟ್ಟೆಗೆ ಕೆಸಿ ವ್ಯಾಲಿ ನೀರು ಹರಿಸುವಂತಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಯರಗೋಳ್ ಗೋಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.
ಸರ್ಕಾರದ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೊಳವೆಮಾರ್ಗ ಹಾಗೂ ಶುದ್ಧೀಕರಣ ಘಟಕದ ಕಾಮಗಾರಿ ಬಾಕಿ ಇವೆ. ಸರ್ಕಾರ ಕೊಟ್ಟ ಮಾತಿನಂತೆ ಕೆಸಿ ವ್ಯಾಲಿಯ 400 ಎಂಎಲ್‌ಡಿ ನೀರು ಹರಿದರೆ, ಮಾರ್ಕಾಂಡೇಯ ಡ್ಯಾಂ ತುಂಬಿ ಯರಗೋಳ್‌ಗೆ ನೀರು ಬರುತ್ತದೆ. ಹಲವು ಕೆರೆಗಳ ಮೂಲಕ ಕೆಸಿ ವ್ಯಾಲಿ ನೀರು ಹರಿಯುವುದರಿಂದ, ನೀರು ನೈಸರ್ಗಿಕವಾಗಿ ಶುದ್ಧೀಕರಣಗೊಳ್ಳುತ್ತದೆ. ಎಸ್.ಎನ್.ನಾರಾಯಣಸ್ವಾಮಿ ಶಾಸಕ ಬಂಗಾರಪೇಟೆ ಯರಗೋಳ್ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದೆ. ಡ್ಯಾಂಗೆ ನೀರು ಬರುವವರೆಗೂ ಉದ್ಘಾಟನೆ ಮಾಡುವುದಿಲ್ಲ. ಡ್ಯಾಂಗೆ ಮಾಕರ್ಂಡೇಯ ಡ್ಯಾಂ ಮೂಲಕ ಕೆಸಿ ವ್ಯಾಲಿ ನೀರು ಹರಿಸಿ ಭರ್ತಿ ಮಾಡುವ ಕಾರ್ಯ ಮಾಡಲಾಗುತ್ತದೆ. ನಂತರ ಶುದ್ಧೀಕರಿಸಿ ಮೂರು ತಾಲೂಕಿನ ಗ್ರಾಮಗಳಿಗೆ ನೀಡುತ್ತೇವೆ. ಕೆ.ಶ್ರೀನಿವಾಸಗೌಡ, ಕೋಲಾರ ಶಾಸಕ