

ಜಿ.ನಾಗರಾಜ್ ಬೂದಿಕೋಟೆ
ಯರಗೋಳ್ ಡ್ಯಾಂನ ಮೇಲ್ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಗಡಿಭಾಗದ ತಮಟಮಾಕನಹಳ್ಳಿ, ದೇವರಗುಟ್ಟಹಳ್ಳಿ ಮತ್ತು ರಾಮಕೃಷ್ಣಪುರ ಗ್ರಾಮಗಳು ಜಲದಿಗ್ಬಂಧನಕ್ಕೆ ಸಿಲುಕಿವೆ.
ಜಿಲ್ಲೆಯ ಮೂರು ತಾಲೂಕುಗಳಿಗೆ ಕುಡಿಯುವ ನೀರು ಒದಗಿಸಲು ಡ್ಯಾಂ ನಿರ್ಮಿಸಲಾಗಿದ್ದು, 13 ವರ್ಷಗಳ ಬಳಿಕ ತುಂಬಿ ಹರಿಯುತ್ತಿದೆ. ಡ್ಯಾಂ ನಿರ್ಮಾಣಕ್ಕೂ ಮುನ್ನ ಕನಮನಹಳ್ಳಿ ಬಳಿ ಮಾರ್ಕಂಡೇಯ ಡ್ಯಾಂಗೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಯ ಮೂಲಕ ಈ ಮೂರು ಗ್ರಾಮ ಸೇರಿ ತಮಿಳುನಾಡಿನ ಇತರ ಗ್ರಾಮಗಳ ಜನರು ಸಂಚರಿಸುತ್ತಿದ್ದರು. ಈಗ ಹಲವು ಗ್ರಾಮಗಳ ಜನರಿಗೆ ಕನಮನಹಳ್ಳಿ ಮೂಲಕ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ತೆರಳಲು ಸಂಪರ್ಕವೇ ಇಲ್ಲದಂತಾಗಿದೆ.
ಶಾಲೆಗೆ ಹೋಗಲು ಆಗುತ್ತಿಲ್ಲ: ಡ್ಯಾಂ ತುಂಬಿ ಹರಿದರೆ ಈ ಗ್ರಾಮಗಳ ಮಕ್ಕಳು ಕನಮನಹಳ್ಳಿ ಪ್ರೌಢಶಾಲೆಗೆ ಹೋಗಲು ಸಂಪರ್ಕ ರಸ್ತೆಯೇ ಇಲ್ಲ. ಹಿಂದೆ ಮೂರು ದಿನ ಇದೇ ಸಮಸ್ಯೆ ಸೃಷ್ಟಿಯಾಗಿತ್ತು. ಈಗ ಮತ್ತೊಮ್ಮೆ ಶಾಲೆಗೆ ಹೋಗಲು ಸಂಪರ್ಕ ಕಡಿತಗೊಂಡಿದೆ. ಮೇಲ್ಸೇತುವೆ ಮೇಲೆ ರಭಸವಾಗಿ ನೀರು ಹರಿಯುತ್ತಿರುವುದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಅನಾರೋಗ್ಯ ಉಂಟಾದರೆ ಸಮಸ್ಯೆ: ಮೇಲ್ಸೇತುವೆ ಆಚೆಗಿನ ಗ್ರಾಮಗಳ ಜನರಿಗೆ ಅನಾರೋಗ್ಯದ ಸಮಸ್ಯೆಯಾದರೆ ಬಂಗಾರಪೇಟೆಯ ತಾಲೂಕು ಅಥವಾ ಕೋಲಾರದ ಜಿಲ್ಲಾಸ್ಪತ್ರೆಗೆ ಹೋಗಬೇಕು. ಆದರೆ ಈಗ ಆಂಬ್ಯುಲೆನ್ಸ್‌ಗಳು ಈ ಗ್ರಾಮಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮೂರು ಗ್ರಾಮಗಳ ಜನರು ಕನಮನಹಳ್ಳಿ ಬಳಿಯ ಮೇಲ್ಸೇತುವೆ ಮೂಲಕವೇ ಸಂಚರಿಸಬೇಕಾಗಿದೆ. ಡ್ಯಾಂನಿಂದ ಹರಿಯುವ ನೀರಿನ ಪ್ರಮಾಣ ಕಡಿಮೆಯಾದರೆ ರಸ್ತೆ ಸಂಪರ್ಕ ಸಿಗಲು ಸಾಧ್ಯವಿದೆ.
ಮೇಲ್ಸೇತುವೆ ದೊಡ್ಡದು ಮಾಡಿ: ಕನಮನಹಳ್ಳಿ ಬಳಿಯ ಮೇಲ್ಸೇತುವೆ ಕಿರಿದಾಗಿದ್ದು, ಅದನ್ನು ಭಾರಿ ಗಾತ್ರದ ಮೇಲ್ಸೇತುವೆಯನ್ನಾಗಿ ನಿರ್ಮಿಸಿದರೆ ಮಾತ್ರ ಇಲ್ಲಿನ ಗ್ರಾಮಗಳ ಜನತೆಯ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಶೀಘ್ರ ಮೇಲ್ಸೇತುವೆ ನಿರ್ಮಿಸಬೇಕು ಎಂದು ಗಡಿಭಾಗದ ಗ್ರಾಮಗಳ ಜನರು ಒತ್ತಾಯಿಸಿದ್ದಾರೆ.
ಯರಗೋಳ್ ಡ್ಯಾಂ ಕೋಡಿ ಹರಿದಾಗ ಹಲವು ಗ್ರಾಮಗಳ ಜನರಿಗೆ ಸಮಸ್ಯೆಯಾಗುತ್ತಿದೆ. ಕನಮನಹಳ್ಳಿ ಬಳಿಯ ಮೇಲ್ಸೇತುವೆ ಎತ್ತರಿಸಲು ಶಾಸಕರಿಗೆ ಮನವಿ ಮಾಡಲಾಗಿದೆ. ಸರ್ಕಾರದಿಂದ ಅನುದಾನ ಪಡೆದು ಮೇಲ್ಸೇತುವೆ ನಿರ್ಮಿಸುವ ಭರವಸೆ ನೀಡಿದ್ದಾರೆ. ಬಂಗಾರಪೇಟೆಗೆ ಸಂಪರ್ಕಕ್ಕೆ ಬದಲಿಯಾಗಿ ಮೂತನೂರು ಮೂಲಕ ರಸ್ತೆಯಿದ್ದು ಅದು ಸ್ವಲ್ಪ ದೂರವಾಗಲಿದೆ.
ರಾಮಪ್ಪ, ಬಲಮಂದೆ, ಗ್ರಾಪಂ ಅಧ್ಯಕ್ಷ
ಮಾಕರ್ಂಡೇಯ ಡ್ಯಾಂಗೆ ನಿರ್ಮಿಸಿರುವ ಮೇಲ್ಸೇತುವೆ ಕಿರಿದಾಗಿದೆ. ಇದರಿಂದಾಗಿ ಯರಗೋಳ್ ಡ್ಯಾಂ ನಿರ್ಮಿಸಿದ ಬಳಿಕ ಡ್ಯಾಂನಿಂದ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ಮೇಲ್ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಸೇತುವೆಯ ಆಚೆಗಿನ ಗ್ರಾಮಗಳ ಮಕ್ಕಳು ಶಾಲೆಗೆ ಹಾಜರಾಗಲು ಕಷ್ಟವಾಗಿದೆ. ಈ ಹಿಂದೆ ಮಕ್ಕಳಿಗೆ ಮೂರು ದಿನ ರಜೆ ನೀಡಲಾಗಿತ್ತು.
ಮನ್ನೋಜಿರಾವ್, ಎಸ್‌ಡಿಎಂಸಿ ಅಧ್ಯಕ್ಷ ಕನಮನಹಳ್ಳಿ