

ಕಂಪ್ಲಿ : ಯಂತ್ರಶ್ರೀ ಭತ್ತ ನಾಟಿ ಪದ್ಧತಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಯೋಜನೆ ಅಧಿಕಾರಿ ಎಂ.ಎ.ಹಾಲಪ್ಪ ಹೇಳಿದರು.
ಇಲ್ಲಿನ ಎಸ್‌ಕೆಡಿಆರ್‌ವೈ ಬಿ.ಸಿ.ಟ್ರಸ್ಟ್ ಯೋಜನಡಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಯಂತ್ರಶ್ರೀ ಭತ್ತ ನಾಟಿ ಪದ್ಧತಿ ಅನುಷ್ಠಾನಗೊಳಿಸಲು ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕನಿಷ್ಠ 500ಎಕರೆ ಯಂತ್ರಶ್ರೀ ಪದ್ಧತಿಯಲ್ಲಿ ಭತ್ತ ಸಸಿ ಬೆಳೆಸುವಿಕೆ, ನಾಟಿ ಮಾಡುವಿಕೆಯ ಗುರಿ ಸಾಧಿಸಬೇಕಿದೆ. ಈ ಪದ್ಧತಿಯಲ್ಲಿ ಭತ್ತ ಬೆಳೆಯುವುದರಿಂದ ರೈತರಿಗೆ ಅನುಕೂಲವಾಗಲಿದೆ. ಯಂತ್ರಶ್ರೀ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ, ಹೆಚ್ಚಿನ ಲಾಭಗಳಿಸುವ ಕುರಿತು ರೈತರಿಗೆ ಮನದಟ್ಟು ಮಾಡಿಕೊಡಬೇಕಿದೆ ಎಂದರು.
ಯಂತ್ರಶ್ರೀ ನಾಟಿ ಬ್ಯಾಂಕ್ ಮೇಲ್ವಿಚಾರಕ ಹನುಮಂತಪ್ಪ ಮಾತನಾಡಿ, ಯಂತ್ರಶ್ರೀ ಪದ್ಧತಿ ಅಳವಡಿಕೆಯಿಂದ ರೈತರಿಗೆ ಸಮಯ, ನೀರು, ಕೃಷಿ ಕೂಲಿ, ಕೃಷಿ ನಿರ್ವಹಣೆ ವೆಚ್ಚ ಸೇರಿ ಸಮಗ್ರ ಕೃಷಿ ವೆಚ್ಚ ಕಡಿಮೆಯಾಗಿ ಹೆಚ್ಚಿನ ಇಳುವರಿ ದೊರಕಲಿದೆ ಎಂದರು. ಕಾರ್ಯಕ್ರಮದಲ್ಲಿ ರೈತರ ಹೆಸರು ನೋಂದಣಿ, ಗದ್ದೆ ಆಯ್ಕೆ, ಒಳ್ಳೆ ಮಣ್ಣಿನ ಸಂಗ್ರಹಣೆ, ಬೀಜದ ಆಯ್ಕೆ, ನರ್ಸರಿ ತಯಾರಿ, ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕುರಿತು ಚರ್ಚಿಸಲಾಯಿತು. ಕೃಷಿ ಅಧಿಕಾರಿ ಸಂಜುಕುಮಾರ, ಮೇಲ್ವಿಚಾರಕರಾದ ಮಂಜುಳಾ, ಅವಿನಾಶ, ಶೈಲಾ, ರವಿಚಂದ್ರ, ತಾಲೂಕಿನ 35ಜನ ಸೇವಾ ಪ್ರತಿನಿಧಿಗಳಿದ್ದರು.