ಯಮುನಾ ನಾಯ್ಕ ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯ

Yamuna Naik Case
Published on

ಭಟ್ಕಳ: ಮುರ್ಡೇಶ್ವರದ ಯಮುನಾ ನಾಯ್ಕ ಕೊಲೆ ಪ್ರಕರಣವನ್ನು ನ್ಯಾಯಾಲಯದ ಆದೇಶದಂತೆ ಶೀಘ್ರ ಮರುತನಿಖೆ ಮಾಡಿ ನಿಜವಾದ ಆರೋಪಿಯನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ಶ್ರೀರಾಮಸೇನೆಯ ಸದಸ್ಯರು ಡಿವೈಎಸ್ಪಿ ಮಹೇಶ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ಶ್ರೀರಾಮಸೇನೆ ಉತ್ತರ ಪ್ರಾಂತ್ಯ ಉಪಾಧ್ಯಕ್ಷ ಜಯಂತ ನಾಯ್ಕ ಮಾತನಾಡಿ, 2010ರಲ್ಲಿ ಮುರ್ಡೇಶ್ವರದಲ್ಲಿ ಯಮುನಾ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಪ್ರಕರಣ ನಡೆದು 15 ವರ್ಷ ಕಳೆದಿದೆ. ಈ ಪ್ರಕರಣದಲ್ಲಿ ಅಮಾಯಕ ವೆಂಕಟೇಶ ಹರಿಕಾಂತ ಎಂಬುವವರನ್ನು ಸಿಲುಕಿಸಿ ಸುಮಾರು ಏಳು ವರ್ಷಗಳ ಕಾಲ ಜೈಲು ವಾಸ ಅನುಭವಿಸುವಂತೆ ಮಾಡಲಾಯಿತು. ಜಿಲ್ಲಾ ನ್ಯಾಯಾಲಯ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿ, ಪ್ರಕರಣದ ಮರು ತನಿಖೆಗೆ ಆದೇಶ ನೀಡಿತ್ತು. ಈ ಹಿಂದೆಯೂ ನಾವು ಡಿವೈಎಸ್ಪಿ ಯವರಿಗೆ ಮನವಿ ಸಲ್ಲಿಸಿದ್ದರೂ ಮರುತನಿಖೆ ಪೂರ್ಣಗೊಂಡಿಲ್ಲ. ಇದೀಗ ಡಿವೈಎಸ್ಪಿ ಮಹೇಶ ಕೆ ತನಿಖೆ ಒಂದು ಹಂತಕ್ಕೆ ಬಂದಿದ್ದು ಅದಷ್ಟು ಬೇಗ ನ್ಯಾಯ ಒದಗಿಸಿಕೊಡುವದಾಗಿ ಹೇಳುತ್ತಿದ್ದಾರೆ.

ಇನ್ನು ನಮಗೆ ಕಾಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಶ್ರೀರಾಮ ಸೇನೆಯಿಂದ ವೇದಿಕೆ ಸಜ್ಜು ಮಾಡುತ್ತೇವೆ. ಪೊಲೀಸ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯದ ಆದೇಶದಂತೆ ಪ್ರಕರಣದ ಮರುತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಈ ಕುರಿತು ವಿಶೇಷ ಆಸಕ್ತಿ ವಹಿಸಿ ಮರುತನಿಖೆಗೆ ಚುರುಕು ಮುಟ್ಟಿಸಬೇಕಾಗಿದೆ. ಈ ಹಿಂದೆ ಸಮಾಜದ ಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ ಜತೆಗೂ ಪ್ರಕರಣದ ಕುರಿತಾಗಿ ಮಾತನಾಡಿದ್ದು ಸಮಾಜದ ಮುಖಂಡರೆಲ್ಲರೂ ಚರ್ಚಿಸಿ ಪೊಲೀಸರೊಂದಿಗೆ ಮಾತನಾಡಿ ಎಂಬ ಸಲಹೆ ನೀಡಿದ್ದರು. ಸಮಾಜದ ಮುಖಂಡರು ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಇನ್ನಾದರೂ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶ್ರಿರಾಮ ಸೇನೆ ಪ್ರಮುಖರಾದ ರಾಘು ನಾಯ್ಕ, ಮಂಜುನಾಥ ನಾಯ್ಕ, ರಾಮ ನಾಯ್ಕ, ನಾಗರಾಜ ನಾಯ್ಕ, ಸಂತೋಷ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net