ಯಮನೂರ ಚಾಂಗದೇವ ಮಹಾರಾಜ್ ಕೀ...

NVL BENNI HALLA
Published on

ನವಲಗುಂದ: ತಾಲೂಕಿನ ಯಮನೂರ ಗ್ರಾಮದ ಚಾಂಗದೇವ ಮಹಾರಾಜ ಉರ್ಫ್ ರಾಜ ಭಾಗಸವಾರ ಗಂಧಾಭಿಷೇಕ (ಸಂದಲ) ಲಕ್ಷಾಂತರ ಭಕ್ತರ ನಡುವೆ ಮಂಗಳವಾರ ಅದ್ದೂರಿಯಾಗಿ ನಡೆಯಿತು.

ಯಮನೂರ ಗ್ರಾಮದ ಆರಾಧ್ಯದೈವ ಚಾಂಗದೇವರ ಗರ್ಭ ಗುಡಿಯಲ್ಲಿ ಪೂಜೆ ನಡೆಸಿದ ಸಂತರು ಬೆಣ್ಣಿ ಹಳ್ಳಕ್ಕೆ ನೀರು ತರಲು ಹೊರಡುವ ಸಮಯದಲ್ಲಿ ರಸ್ತೆಯ ಮೇಲೆ ಭಕ್ತರು ಬೆನ್ನು ಮೇಲಾಗಿ ಮಲಗತೊಡಗಿದರು. ಸಂತರ ಪಾದ ಸ್ಪರ್ಶದಿಂದ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಭಕ್ತರದು. ಗದ್ದಲ ಹೆಚ್ಚಾದಾಗ ಪೊಲೀಸರು ಲಾಠಿ ರುಚಿ ತೋರಿಸಲು ಮುಂದಾದರು. ಆಗ ನಿರಾಶರಾದ ಭಕ್ತರು ಪಕ್ಕಕ್ಕೆ ಸರಿದರು. ಆದರೆ, ಬೆಣ್ಣಿಹಳ್ಳದಿಂದ ತಂದ ನೀರಿನಿಂದ ಗರ್ಭಗುಡಿಯಲ್ಲಿ ಸಂತರು ದೀಪ ಹಚ್ಚುತ್ತಿದಂತೆ ಭಕ್ತರು ಪುಳಕಿತರಾದರು.

ಹಿಂದು-ಮುಸ್ಲಿಂ ಭಾವೈಕ್ಯಕ್ಕೆ ಸಾಕ್ಷಿಯಾದ ಚಾಂಗದೇವರ ದೇವಸ್ಥಾನದಲ್ಲಿ ವಿನೋದರಾವ್ ಬರ್ಗೆ, ಓಂಕಾರ ಬರ್ಗೆ ಹಾಗೂ ಪಾತಿಹಾವನ್ನು ಧರ್ಮಗುರು ಬಾಬಾಜಾನ್ ಮಕಾನದಾರ ಅವರು (ಓದಿಕೆ) ಏಕಕಾಲಕ್ಕೆ ನಡೆದು ಹಿಂದು-ಮುಸ್ಲಿ ಸಮಾಜದವರಲ್ಲಿ ಸಂತೃಪ್ತ ಭಾವ ಮೂಡಿಸಿತು.

ದೇವರ ದರ್ಶನಕ್ಕೂ ಮುನ್ನ 1.5 ಕಿಮೀ ದೂರದಲ್ಲಿರುವ ಬೆಣ್ಣಿ ಹಳ್ಳದಲ್ಲಿ ಸ್ನಾನ ಮಾಡುವುದು ವಾಡಿಕೆ. ಈ ಹಳ್ಳದಲ್ಲಿ ಸ್ನಾನ ಮಾಡಿದರೆ ಯಾವುದೇ ಚರ್ಮ ರೋಗವಿದ್ದರೂ ವಾಸಿಯಾಗುತ್ತವೆ ಎಂಬುದು ಭಕ್ತರ ನಂಬಿಕೆ. ಕಳೆದ ಬಾರಿ ನೀರಿಲ್ಲದೆ ಪರದಾಡಿದ್ದರು ಭಕ್ತರು, ಈ ಬಾರಿ ಮಲಪ್ರಭಾ ಕಾಲುವೆ ನೀರು ಹರಿಯುತ್ತಿರುವುದರಿಂದ ನೀರಿನ ಸಮಸ್ಯೆ ಕಂಡು ಬರಲಿಲ್ಲ. ಭಕ್ತರು ಪುಣ್ಯ ಮಜ್ಜನಗೈದರು.

ಶಾಸಕ ಎನ್.ಎಚ್. ಕೋನರಡ್ಡಿ ಅವರು ದಂಪತಿ ಸಮೇತ ಚಾಂಗದೇವರ ದರ್ಶನ ಪಡೆದರು. ರಾಜ ಭಾಗಸವಾರಕಿ ದೋಸ್ತರಹೋದ್ದಿನ್... ಚಾಂಗದೇವ ಮಹಾರಾಜಕೀ ಜೈ ಎಂಬ ಜಯ ಘೊಷ ಮೊಳಗಿಸಿದರು.

ಬೆಣ್ಣೆಹಳ್ಳಕ್ಕೆ ಮೆಟ್ಟಿಲುಗಳನ್ನು ನಿರ್ವಿುಸಿ ಬಂದ ಭಕ್ತಾದಿಗಳಿಗೆ ಸ್ನಾನ ಮಾಡಲು ಯಮನೂರ ಆರ್ತಿ ಎಂಬ ನಾಮಕರಣದಿಂದ ಮೊದಲನೆ ಹಂತದಲ್ಲಿ ಅಂದಾಜು 12 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ನಿರ್ಧರಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಶಾಸಕ ಎನ್.ಎಚ್. ಕೋನರಡ್ಡಿ ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net