ಮಾದಪ್ಪನ ಯಾಮನ ಪೂಜೆ

09 HANUR 1
ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶುಕ್ರವಾರ ತಡರಾತ್ರಿ ಸ್ವಾಮಿಗೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಯಾಮನ ಪೂಜೆ ಸಲ್ಲಿಸಲಾಯಿತು.
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾಶಿವರಾತ್ರಿ 3ನೇ ದಿನದ ಅಂಗವಾಗಿ ಶುಕ್ರವಾರ ತಡರಾತ್ರಿ ಸ್ವಾಮಿಗೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಯಾಮನ ಪೂಜೆಯನ್ನು ಸಂಪ್ರದಾಯಿಕವಾಗಿ ನೆರವೇರಿಸಿದರು.

ವಿಶೇಷ ಯಾಮನ ಪೂಜೆಯ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆಯ ಬಳಿಕ ದೇಗುಲಕ್ಕೆ ತೆರಳಿದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾದಪ್ಪನ ಮೂರ್ತಿ ಸ್ವರೂಪಿ ಲಿಂಗಕ್ಕೆ ಅಭಿಷೇಕ ನೆರವೇರಿಸಿದರು. ಶ್ರೀಗಳ ಸಾನ್ನಿಧ್ಯದಲ್ಲಿ ದಾನಿಗಳು ನೀಡಿದ್ದ ಚಿನ್ನದ ಕಿರೀಟವನ್ನು ಲಿಂಗಕ್ಕೆ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬೆಟ್ಟದ ತಾವರೆ, ಕಾಡು ಮಲ್ಲಿಗೆ, ಮುತ್ತುಗ, ಬನ್ನಿ, ಬಿಲ್ವಪತ್ರ, ಅವ್ರಿಕೆ ಹಾಗೂ ವಿವಿಧ ಪುಷ್ಪಗಳಿಂದ ಸ್ವಾಮಿಯ ಮೂರ್ತಿಯನ್ನು ಸಿಂಗರಿಸಿ ಯಾಮನ ಪೂಜೆ ನೆರವೇರಿಸಲಾಯಿತು. ದೇಗುಲದ ಆವರಣದಲ್ಲಿ ಸ್ವಾಮಿಯ ಜಾಗರಣೆ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ದೇಗುಲದ ಆವರಣದಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ಶಿವನ ಸ್ಮರಣೆ ಮಾಡಿದರು. ಉಘೇ ಮಾದಪ್ಪ ಉಘೇ ಜಯಘೋಷ ಮೊಳಗಿಸಿದರು. ಶನಿವಾರ ಬೆಳಗಿನ ಜಾವ ಬೇಡಗಂಪಣ ಸರದಿ ಅರ್ಚಕರಿಂದ ಸ್ವಾಮಿಗೆ ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಿದ ಬಳಿಕ ಮಹಾ ಮಂಗಳಾರತಿ ಬೆಳಗಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.

ಶಿವರಾತ್ರಿ ಹಿನ್ನೆಲೆಯಲ್ಲಿ ಶನಿವಾರ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಸೇವಾ ಉತ್ಸವಾದಿಗಳು ನೆರವೇರಿದವು. ಇನ್ನುಳಿದಂತೆ ಆಗಮಿಸಿದ್ದ ಭಕ್ತರು ಹುಲಿ ವಾಹನ, ರುದ್ರಾಕ್ಷಿ ವಾಹನ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಈ ಉತ್ಸವಗಳು ಬೆಳಗ್ಗೆಯಿಂದ ಸಂಜೆಯವರೆಗೆ ಜರುಗಿತು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದರು. ಕೆಲ ಭಕ್ತರು ಧನ, ಧಾನ್ಯ ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು. ಉತ್ಸವದಲ್ಲಿ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಘೋಷಣೆಗಳನ್ನು ಕೂಗಿ ಭಕ್ತಿ ಭಾವವನ್ನು ಮೆರೆದರು. ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ ನೆರವೇರಿಸಿದರು.

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದು, ದೇವರ ದರ್ಶನ ಪಡೆದು ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಕೆಲ ಭಕ್ತರು ನಾಗಮಲೆಗೂ ತೆರಳಿ ದೇವರ ದರ್ಶನ ಪಡೆದು ಹಿಂತಿರುಗಿದ್ದಾರೆ. ಭಾನುವಾರ ಶಿವರಾತ್ರಿ ಅಮಾವಾಸ್ಯೆ ಹಾಗೂ ಸೋಮವಾರ ಬೆಳಗ್ಗೆ ಜರುಗುವ ಮಹಾ ರಥೋತ್ಸವ ಹಾಗೂ ರಾತ್ರಿ ಕೊಂಡೋತ್ಸವವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಮ.ಬೆಟ್ಟದಲ್ಲೇ ಬೀಡು ಬಿಟ್ಟಿದ್ದಾರೆ. ಶಕ್ತಿ ಯೋಜನೆಯ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದು, ಮಹಾರಥೋತ್ಸವ ದಿನದಂದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.

ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರಂತರ ದಾಸೋಹ ವ್ಯವಸ್ಥೆ, ಕುಡಿಯುವ ನೀರು, ನೆರಳು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಸೂಕ್ತ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರು ಜಾತ್ರೆಯು ಸುಸೂತ್ರವಾಗಿ ನಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net