ಯಮಕನಮರಡಿ ಸಮಗ್ರ ಅಭಿವೃದ್ಧಿಗೆ ಬದ್ಧ - ಶಾಸಕ ಸತೀಶ ಜಾರಕಿಹೊಳಿ

12121
Published on

ಉಳ್ಳಾಗಡ್ಡಿ-ಖಾನಾಪೂರ: ಯಮಕನಮರಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಯಮಕನಮರಡಿ ಗ್ರಾಪಂ ಕಾರ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಾಗಬೇಕಾದ ಹಲವಾರು ಪ್ರಗತಿ ಕಾರ್ಯಗಳ ಬಗ್ಗೆ ನೂತನ ಗ್ರಾಪಂ ಅಧ್ಯಕ್ಷರ ಆಯ್ಕೆ ನಂತರ ಚರ್ಚಿಸಿ ಯಮಕನಮರಡಿ ಅಭಿವೃದ್ಧಿ ಪಡಿಸೋಣ ಎಂದರು.

ಕ್ಷೇತ್ರದಲ್ಲಿ ಹೊಲಗದ್ದೆಗಳಿಗೆ ದಾರಿ ಸೇರಿದಂತೆ ಕೆಲ ಸಣ್ಣ-ಪುಟ್ಟ ಕಾಮಗಾರಿಗಳು ನಡೆಯಬೇಕಾಗಿದೆ. ಅದನ್ನೂ ಗಮನದಲ್ಲಿಟ್ಟಿದ್ದೇನೆ ಎಂದರು. ನೂತನ ಗ್ರಾಪಂ ಸದಸ್ಯರು ಜನರು ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಂಡು, ಮೂಲಭೂತ ಸೌಲಭ್ಯ ಸೇರಿದಂತೆ ಗ್ರಾಮೀಣ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು, ಜನಪರ ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ನೂತನವಾಗಿ ಆಯ್ಕೆಯಾದ ಸದಸ್ಯರು ಶಾಸಕರನ್ನು ಸ್ಮಾನಿಸಿದರು. ಗ್ರಾಮಸ್ಥರಿಗೆ ಶಾಸಕರು ಸಂಕ್ರಾಂತಿಯ ಶುಭಾಷಯ ಕೋರಿದರು. ಈ ಸಂದರ್ಭದಲ್ಲಿ ಕ್ಷೇತ್ರದ ನರಸಿಂಗಪುರ, ಮಣಗುತ್ತಿ ಹಾಗೂ ಹಳೆಗುಡಗನಟ್ಟಿ ಗ್ರಾಮಗಳಿಗೂ ಶಾಸಕ ಸತೀಶ ಜಾರಕಿಹೊಳಿ
ಭೇಟಿ ನೀಡಿ ಜನರ ಆಹವಾಲುಗಳನ್ನು ಸ್ವೀಕರಿಸಿದರು.

ಬಹುದಿನಗಳಿಂದ ಹಳೆಗುಡಗನಟ್ಟಿ ಗ್ರಾಮದ ಜನರಿಗೆ ಸಮರ್ಪಕವಾಗಿ ದೊರೆಯದೆ ಇದ್ದ ಪಡಿತರ ವ್ಯವಸ್ಥೆಯ ಬಗ್ಗೆ ಅಲ್ಲಿನ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ ಈ ಸಮಸ್ಯೆಯನ್ನು ಶಾಸಕ ಸತೀಶ ಜಾರಕಿಹೊಳಿಯವರು ಖುದ್ದಾಗಿ ಪರಿಶೀಲಿಸಿ ತ್ವರಿತವಾಗಿ ಅಧಿಕಾರಿಗಳು ಸರಿ ಪಡಿಸುವಂತೆ ಆದೇಶಿಸಿದರು.

ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವೀರಣ್ಣ ಬಿಸಿರೊಟ್ಟಿ, ಕಿರಣ ರಜಪೂತ, ದೇವಪ್ಪ ಹುನ್ನರಗಿ,
ಪಿಡಿಒ ಶಿವಲಿಂಗ ಢಂಗ, ಗ್ರಾಪಂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net