

ಕೆ.ಆರ್.ಸಾಗರ: ದೇವರಿಗಾಗಿ ದೇವಸ್ಥಾನಗಳನ್ನು ನಿರ್ಮಿಸುವುದು ಸಾಮಾನ್ಯ. ಆದರೆ, ಯಮಧರ್ಮಗಾಗಿ ದೇವಸ್ಥಾನವೊಂದನ್ನು ನಿರ್ಮಿಸಲು ಮುಂದಾಗಿರುವುದು, ಅದನ್ನು ಗುಂಪೊಂದು ನೆಲಸಮಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರೈಲ್ವೆ ನಿಲ್ದಾಣದ ಹಿಂಭಾಗದ ಹೊಸ ಉಂಡವಾಡಿ ಗ್ರಾಮಕ್ಕೆ ಸೇರಿದ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಯಮಧರ್ಮರಾಯನ ದೇವಸ್ಥಾನವನ್ನು ಮೈಸೂರಿನ ಸತ್ಯನಾರಾಯಣ ಮತ್ತು 10 ಜನ ಹಿಂಬಾಲಕರು ಜೆಸಿಬಿ ಮೂಲಕ ಡಿ.23 ರಂದು ನೆಲಸಮ ಮಾಡಿದ್ದಾರೆಂದು ಆರೋಪಿಸಿ ಕೆ.ಆರ್.ಸಾಗರ ನಿವಾಸಿ ಕೆ.ಎನ್.ರಾಜು ಗುರುವಾರ ದೂರು ನೀಡಿದ್ದಾರೆ.
ನನ್ನ ಸ್ವಂತ ಜಾಗದಲ್ಲಿ ಶನಿದೇವರ ದೇವಸ್ಥಾನ ನಿರ್ಮಿಸಿದ್ದು, ಈಗ ಯಮಧರ್ಮರಾಯನ ದೇವಸ್ಥಾನ ನಿರ್ಮಿಸಲು ಹೊರಟಿದ್ದೆ. ಜಾಗ ನನ್ನ ಹೆಸರಿನಲ್ಲಿ ಖಾತೆ ಆಗಿದ್ದು, ಹುಲಿಕೆರೆ ಗ್ರಾಮ ಪಂಚಾಯಿತಿಗೆ ಕಂದಾಯ ಕಟ್ಟುತ್ತಿದ್ದೇನೆ. ಶನಿ ದೇವರ ದೇವಸ್ಥಾನ ಕಟ್ಟಿದ ನಂತರ ಸುತ್ತಮುತ್ತಲಿನ ಜಾಗಕ್ಕೆ ಬೆಲೆ ಹೆಚ್ಚಿದ್ದು, ಜಾಗದ ಮೂಲ ಮಾಲೀಕರಾದ ಸತ್ಯನಾರಾಯಣ ಮತ್ತು ಅವರ ಜತೆ ಬಂದ 10 ಸಹಚರರು ದೇವಸ್ಥಾನವನ್ನು ಒಡೆದು ನೆಲಸಮ ಮಾಡಿದ್ದಾರೆ. ನಾನು ನಿರ್ಮಿಸಿದ್ದ ಶನಿದೇವರ ಮುಖ್ಯದ್ವಾರಕ್ಕೂ ಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸತ್ಯನಾರಾಯಣ ದಬ್ಬಾಳಿಕೆ ನಡೆಸಿ ಮಾನಸಿಕವಾಗಿ ತೊಂದರೆ ನೀಡಿ ನನ್ನಿಂದ ಜಾಗ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ವಿಷ್ಟುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಿದ್ದೆ. ಈಗ ಯಮಧರ್ಮನ ದೇವಸ್ಥಾನ ಜನರಿಗಾಗಿ ನಿರ್ಮಾಣ ಮಾಡುತ್ತಿದ್ದೇನೆ. ನನಗೆ ಯಾವುದೇ ಆಸೆಗಳಿಲ್ಲ ಎಂದು ರಾಜು ವಿಜಯವಾಣಿಗೆ ತಿಳಿಸಿದರು.