

ಗೋಕರ್ಣ: ಐದು ದಿನ ಶಾಸ್ತ್ರೋಕ್ತವಾಗಿ ಈ ಭಾಗದಲ್ಲಿ ಆಚರಿಸಲ್ಪಡುವ ದೀಪಾವಳಿ ಹಬ್ಬ ನಿಮಿತ್ತ ಮಂಗಳವಾರ ಇಲ್ಲಿನ ಪ್ರತಿ ಮನೆಗಳ ಮುಂಭಾಗದಲ್ಲಿ ಸಾಯಂ ಪ್ರದೋಷಕಾಲದಲ್ಲಿ ಸುಮಂಗಲೆಯರು ಶಿಂಡಲಕಾಯಿಯ ಹಣತೆಯಲ್ಲಿ ತೈಲ ದೀಪವನ್ನು ಬೆಳಗಿ ದೀಪಾವಳಿಗೆ ಶುಭಾರಂಭ ಮಾಡಿದರು.
ಆಶ್ವೀಜ ಕೃಷ್ಣ ತ್ರಯೋದಶಿಯಂದು ತ್ರಿಸಂಧ್ಯಾ ಕಾಲದಲ್ಲಿ ಯಮನ ಪ್ರೀತ್ಯರ್ಥವಾಗಿ ಈ ರೀತಿ ದೀಪ ಹಚ್ಚುವುದರಿಂದ ಅಪಮೃತ್ಯು ಭಯ ದೂರಾಗುತ್ತದೆ ಎಂಬ ಪ್ರತೀತಿಯಿರುವ ಹಿನ್ನೆಲೆಯಲ್ಲಿ ಈ ಆಚರಣೆಗೆ ವಿಶೇಷ ಮಹತ್ವವಿದೆ. ಯಾರು ದೀಪಾವಳಿಯ ಈ ಐದು ದಿನ ಪ್ರದೋಷ ಸಮಯದಲ್ಲಿ ಈ ಪ್ರಕಾರದಲ್ಲಿ ದೀಪೋತ್ಸವ ಮಾಡುವರೋ ಅವರಿಗೆ ಅಪಮೃತ್ಯುವಿನ ಬಾಧೆಯಿಂದ ಮುಕ್ತರಾಗುವವರವನ್ನು ಸಾಕ್ಷಾತ್ ಯಮಧರ್ಮ ದಯಪಾಲಿಸಿದ್ದಾನೆ ಎಂಬ ಪುರಾಣೋಕ್ತಿಯಿರುವ ಕಾರಣ ಅನಾದಿಯಿಂದ ಈ ಭಾಗದಲ್ಲಿ ಯಮದೀಪೋತ್ಸವ ಆಚರಿಸಲ್ಪಡುತ್ತಿದೆ.