ಸಭೆ ಸಮಯ ನುಂಗಿದ ಅನಗತ್ಯ ವಿಚಾರ

13-YLP MEETING
Published on

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಂದಿನಂತೆ ಹಿಂದಿನ ಜಾತ್ರೆಯ ಖರ್ಚು-ವೆಚ್ಚಗಳ ಚರ್ಚೆಯೇ ನಡೆಯಿತು. ಜಾತ್ರೆ ವೇಳೆ ಅಂಗಡಿಗಳ ಹರಾಜು ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ, ಫೋಟೋಗಳಿರುವ ಪೆನ್ ಡ್ರೖೆವ್ ಕಳೆದಿರುವ ಕುರಿತು ಮತ್ತೊಮ್ಮೆ ಚರ್ಚೆ ನಡೆಯಿತು. ವಾದ-ವಿವಾದಗಳ ನಂತರ ಚಿತ್ರೀಕರಣ ಮಾಡಿದವರನ್ನು ಕರೆಸಿ ಕೇಳುವ ಕುರಿತು ನಿರ್ಣಯಿಸಲಾಯಿತು.

ಹಿಂದಿನ ಸಭೆಯಲ್ಲಿ ನಾನು ಪ್ರಸ್ತಾಪಿಸಿದ ವಿಚಾರಗಳು ಠರಾವಿನಲ್ಲಿ ಸೇರಿಸಿಲ್ಲ. ನಾನು ಮಾತನಾಡದೇ ಇರುವ ವಿಚಾರಗಳೂ ಠರಾವಿನಲ್ಲಿ ಬಂದಿವೆ. ಹೀಗೆ ತಮಗೆ ಬೇಕಾದಂತೆ ಮಾಡುವುದಾದಲ್ಲಿ ಸಭೆಗೇಕೆ ಕರೆಯುತ್ತೀರಿ ಎಂದು ಸದಸ್ಯ ರಾಜು ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.ಮೀನು ಮಾರುಕಟ್ಟೆಯ ಅಂಗಡಿಗಳಿಗೆ 12 ವರ್ಷಗಳಿಗೊಮ್ಮೆ ಟೆಂಡರ್ ಕರೆಯುವ ನಿರ್ಣಯಕ್ಕೆ ಸದಸ್ಯ ಸೋಮು ನಾಯ್ಕ ವಿರೋಧ ವ್ಯಕ್ತಪಡಿಸಿದರು. ಈಗಾಗಲೇ 12 ಸದಸ್ಯರ ಸಹಿ ಹಾಕಿ ಬಹುಮತದ ಠರಾವು ಮಾಡಿಕೊಟ್ಟಿದ್ದೇವೆ. ಈಗ ಅದರ ಬಗ್ಗೆ ಮತ್ತೆ ಚರ್ಚೆಯ ಅಗತ್ಯವಿಲ್ಲ ಎಂದು ಸದಸ್ಯರಾದ ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಆಕ್ಷೇಪಿಸಿದರು.

ಹಳೆಯ ಠರಾವು ಬೇಡ, ಸಭೆಯಲ್ಲಿ ರ್ಚಚಿಸದೇ ತಮಗೆ ಬೇಕಾದ ಸದಸ್ಯರನ್ನು ಸೇರಿಸಿ, ಅವರ ಸಹಿ ಪಡೆದು ನಿರ್ಣಯಿಸಲಾಗಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸೋಮು ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಸರಿಯಾದ ಠರಾವು ಮಾಡಿ ಈಗಲೇ ಅದರ ಪ್ರತಿ ತಮಗೆ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸತೀಶ ನಾಯ್ಕ, ರಾಧಾಕೃಷ್ಣ ನಾಯ್ಕ ವಿರೋಧಿಸಿದಾಗ, ತೀವ್ರ ವಾಗ್ವಾದ ನಡೆಯಿತು.

ತರಾತುರಿಯ ನಿರ್ಧಾರ ಕೈಗೊಂಡಿರುವುದನ್ನು ನೋಡಿದರೆ ಮೀನು ಮಾರುಕಟ್ಟೆ ಟೆಂಡರ್ ನಿರ್ಣಯ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ ಎಂದು ಸೋಮು ನಾಯ್ಕ ಆರೋಪಿಸಿದರು. ಸಭೆಯ ಅಜೆಂಡಾದಲ್ಲಿ ಇಲ್ಲದ ವಿಷಯಗಳೇ ಸಭೆಯ ಬಹುಪಾಲು ಸಮಯ ನುಂಗಿತು. ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ಸದಸ್ಯರು ಭಾಗವಹಿಸಿದ್ದರು.

ಅಧ್ಯಕ್ಷರು ಯಾರೆಂದು ತಿಳಿಯುತ್ತಿಲ್ಲ!

ಪ್ರತಿ ವಿಷಯದಲ್ಲೂ ತಾವೇ ಮಾತನಾಡುತ್ತ ಸತೀಶ ನಾಯ್ಕ ಅವರೇ ಸಭೆಯನ್ನು ನಿಯಂತ್ರಣ ಮಾಡುತ್ತಾರೆ. ಏನೇ ಮಾತಾನಾಡುವುದಿದ್ದರೂ ಮುಖ್ಯಾಧಿಕಾರಿಗಳು ಅವರ ಮುಖವನ್ನೇ ನೋಡುತ್ತಾರೆ. ನಿಜವಾಗಿ ಪಪಂ ಅಧ್ಯಕ್ಷರು ಯಾರೆಂಬುದೇ ತಿಳಿಯುತ್ತಿಲ್ಲ ಎಂದು ಸೋಮು ನಾಯ್ಕ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net