ನಂದೊಳ್ಳಿ-ಅಣಲಗಾರ ರಸ್ತೆ ಕೆಲಸ ಅರೆಬರೆ

21-yallapur road
Published on

ಶ್ರೀಧರ ಅಣಲಗಾರ ಯಲ್ಲಾಪುರ
ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ನಂದೊಳ್ಳಿ-ಅಣಲಗಾರ ರಸ್ತೆ ಕಾಮಗಾರಿ ಮುಗಿದು ಒಂದು ವಾರ ಕಳೆಯುವ ಮುನ್ನವೇ ಬಣ್ಣ ಬಯಲಾಗಿದ. ಈಗಲೇ ರಸ್ತೆಯಲ್ಲಿನ ಕಡಿ ಕಿತ್ತು ಹೋಗಲಾರಂಭಿಸಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ತಿಂಗಳು ಆರಂಭವಾದ ಕಾಮಗಾರಿ 90 ಲಕ್ಷ ರೂ. ಅನುದಾನದಲ್ಲಿ 3 ಕಿ.ಮೀ. ರಸ್ತೆ ಡಾಂಬರೀಕರಣ ಮಾಡುವ ಯೋಜನೆ ಹೊಂದಲಾಗಿತ್ತು. ಅರ್ಧ ಕಿ.ಮೀ. ಕಡಿಮೆ ಆದರೂ, ಮಾಡಿದಷ್ಟು ದೂರ ಉತ್ತಮ ಗುಣಮಟ್ಟದ ರಸ್ತೆ ಮಾಡುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದ್ದು, 2.5 ಕಿ.ಮೀ. ಮಾತ್ರ ರಸ್ತೆ ಮಾಡಲಾಗಿದೆ. ಕಾಮಗಾರಿ ಮುಗಿದು ವಾರ ಕಳೆಯುವ ಮುನ್ನವೇ ಕಿತ್ತು ಹೋಗಿರುವುದು ಕಂಡು ಬಂದಿದೆ. ತೆಳ್ಳಗೆ ಡಾಂಬರು ಹಾಕಲಾಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ಕಡಿ ಮೇಲೆದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇನ್ನೂ ಮಳೆಗಾಲ ಆರಂಭವಾಗಿಲ್ಲ. ಮಳೆ ಆರಂಭವಾದರೆ ಸಂಪೂರ್ಣ ರಸ್ತೆಯೇ ಕಿತ್ತು ಹೋಗುವ ಆತಂಕವಿದೆ.

ಆರಂಭದಿಂದಲೂ ಅವಾಂತರ!

ಕಳೆದ ಏಪ್ರಿಲ್ನಲ್ಲಿ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ಆಗ ಸಚಿವರಾಗಿದ್ದ ಶಿವರಾಮ ಹೆಬ್ಬಾರ ನೆರವೇರಿಸಿದ್ದರು. ಭೂಮಿ ಪೂಜೆಯಾಗಿ ಒಂದು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಆಗ ಸ್ಥಳೀಯರು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ, ಅದರ ಹಿಂದಿನ ದಿನ ರಾತ್ರೋರಾತ್ರಿ ಜೆಸಿಬಿ ತಂದು ಕೆಲಸ ಆರಂಭಿಸಲಾಗಿತ್ತು. ಮಾರನೇ ದಿನ ನಡೆದ ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಜಿಪಂ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡು, ತಕ್ಷಣ ಕಾಮಗಾರಿ ಆರಂಭಿಸಲು ಆಗ್ರಹಿಸಿದ್ದರು. ಅದರಂತೆ ಎರಡೇ ದಿನಗಳಲ್ಲಿ ಕಾಮಗಾರಿ ಆರಂಭವಾಗಿತ್ತು.

ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಗ್ರಾಮ ಪಂಚಾಯಿತಿಗೆ ದೂರು ಬಂದಿದೆ. ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ವರದಿ ನೀಡಬೇಕು. ಅಲ್ಲಿಯವರೆಗೆ ಗುತ್ತಿಗೆದಾರರಿಗೆ ಬಿಲ್ ಮಾಡಬಾರದು ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.ನರಸಿಂಹ ಕೋಣೆಮನೆನಂದೊಳ್ಳಿ ಗ್ರಾಪಂ ಅಧ್ಯಕ್ಷ ಟೆಂಡರ್‌ನಲ್ಲಿ ಹೇಳಿದಂತೆ ಸಮರ್ಪಕವಾಗಿ ಕೆಲಸ ಆಗದ ಹೊರತು ಒಂದು ರೂಪಾಯಿ ಬಿಲ್ ಸಹ ಪಾವತಿಸುವುದಿಲ್ಲ. ಗ್ರಾಮ ಪಂಚಾಯಿತಿಯಿಂದ ದೂರು ಬಂದಿದೆ. ಒಂದೆರಡು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟ ಪರಿಶೀಲಿಸಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ.ಅಶೋಕ ಬಂಟಎಇಇ ಜಿಪಂ ಇಂಜಿನಿಯರಿಂಗ್ ಉಪವಿಭಾಗ ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net