

ಯಲ್ಲಾಪುರ: ಹುಣಶೆಟ್ಟಿಕೊಪ್ಪ ಜಾತ್ರೆಗೆ ಬಂದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಿ ಸಮುದಾಯದ ಜನತೆ ಭಾನುವಾರ ತಡ ರಾತ್ರಿಯಿಂದ ಠಾಣೆ ಎದುರು ಪ್ರತಿಭಟನೆ ಕುಳಿತಿದ್ದು, ಆರೋಪಿಗಳಲ್ಲೊಬ್ಬನಾದ ಪ್ರಭಾವಿ ವ್ಯಕ್ತಿಯ ಮಗನ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ.
ಪ್ರಭಾವಿಯ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಮಾತ್ರ ಬಂಧಿಸಿಲ್ಲ ಎಂದು ಆರೋಪಿಸಲಾಗಿದೆ.
ಆತನ ಬಂಧನವಾಗುವವರೆಗೂ ಶವವನ್ನು ಪಡೆದುಕೊಳ್ಳುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಪೊಲೀಸರು, ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ರಾತ್ರಿ ಠಾಣೆಗೆ ಭೇಟಿ ನೀಡಿದ ಹೆಚ್ಚುವರಿ ಎಸ್.ಪಿ ಜಯಕುಮಾರ ಅವರು ಸಿದ್ದಿ ಸಮುದಾಯದ ಜನರ ಮನವೊಲಿಸುವ ಯತ್ನ ನಡೆಸಿದರು. ಅದೂ ಯಶಸ್ವಿಯಾಗಿಲ್ಲ. ಭಾನುವಾರ ರಾತ್ರಿ ಪ್ರತಿಭಟನಾಕಾರರು ಮನೆಗೆ ತೆರಳಿದ್ದು, ಸೋಮವಾರ ಬೆಳಗ್ಗೆ ಮತ್ತೆ ಪ್ರತಿಭಟನೆ ಮುಂದುವರಿಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಂಧನ ಆಗುವವರೆಗೂ ಪ್ರತಿಭಟನೆ ಮುಂದುವರಿಸಲು ಸಿದ್ದಿ ಸಮುದಾಯದವರು ತೀರ್ಮಾನಿಸಿದ್ದಾರೆ. ಸೋಮವಾರವೂ ಠಾಣೆ ಎದುರು ಪ್ರತಿಭಟನೆ ಮುಂದುವರಿಯಲಿದೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗನ ಕಾಯಿಲೆಗೆ ಮತ್ತೊಂದು ಬಲಿ