

ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಮಳೆ ಮತ್ತೆ ಜೋರಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತೋಟ-ಪಟ್ಟಿಗಳು ಜಲಾವೃತವಾಗಿವೆ. ಮಂಗಳವಾರ ಸ್ವಲ್ಪ ಬಿಡುವು ನೀಡಿದ್ದ ಮಳೆ, ಬುಧವಾರ ಮತ್ತೆ ಅಬ್ಬರಿಸಿದೆ. ತಾಲೂಕಿನ ಆನಗೋಡ ಗ್ರಾಪಂ ವ್ಯಾಪ್ತಿಯ ಕಾರೆಮನೆ ಬಳಿ ಹಳ್ಳದ ನೀರು ತೋಟಕ್ಕೆ ನುಗ್ಗಿದ್ದರಿಂದ ಫಲವತ್ತ ಮಣ್ಣು ನಾಶವಾಗಿದೆ. ಹಾಸಣಗಿ ಗ್ರಾಪಂ ವ್ಯಾಪ್ತಿಯ ಒಳ್ಳೆಸರದಲ್ಲಿ ಶಾಂತಾ ಎಂಬುವರ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಮಂಚಿಕೇರಿಯ ಶೌರ್ಯ ತಂಡದ ಸದಸ್ಯರು ಮರ ತೆರವುಗೊಳಿಸಿದ್ದಾರೆ. ಮಾಗೋಡ ರಸ್ತೆಯ ಕಾಳಿಮನೆ ಕ್ರಾಸ್ ಬಳಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು.