

ಯಲ್ಲಾಪುರ: ಗ್ಯಾಸ್ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತಾಲೂಕಿನ ಅರಬೈಲ್ ಘಟ್ಟದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಮಹಾರಾಷ್ಟ್ರದ ರತ್ನಗಿರಿಯಿಂದ ಪುತ್ತೂರಿಗೆ ಹೋಗುತ್ತಿದ್ದ ಟ್ಯಾಂಕರ್, ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಗ್ಯಾಸ್ ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಅಂಕೋಲಾ ಕಡೆಗೆ ಹೋಗುವ ವಾಹನಗಳಿಗೆ ಶಿರಸಿ ಮೂಲಕ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಹಾಗೂ ತಂತ್ರಜ್ಞರು ಗ್ಯಾಸ್ ಸೋರಿಕೆಯಾಗುವುದನ್ನು ಸ್ಥಗಿತಗೊಳಿಸಿರು. ಬಳಿಕ ಟ್ಯಾಂಕರ ಅನ್ನು ಮೇಲಕ್ಕೆತ್ತಲಾಗಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯಾದ ಇನ್ನೊಂದು ಲಾರಿಯೂ ಜಖಂಗೊಂಡಿದೆ. ಸ್ಥಳಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಸಂಚಾರ ವ್ಯವಸ್ಥೆ ನಿಯಂತ್ರಿಸುವಲ್ಲಿ ಶ್ರಮಿಸಿದರು.