

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆದು 4 ತಿಂಗಳು ಕಳೆಯುವ ಮುನ್ನವೇ ಕಡಿ ಕಿತ್ತು ಹೋಗಿದೆ. ಇದು ಕಾಮಗಾರಿಯ ನಿಜ ಬಣ್ಣವನ್ನು ಬಯಲು ಮಾಡಿದೆ. ರಸ್ತೆಯ ಮೇಲ್ಪದರು ಕಿತ್ತು ಹೋಗಿದೆ. ನಿಧಾನವಾಗಿ ಚಲಿಸಿ ಎಂದು ಲೋಕೋಪಯೋಗಿ ಇಲಾಖೆ ಫಲಕ ಅಳವಡಿಸುವ ಮೂಲಕ ಕಾಮಗಾರಿಯ ಕಳಪೆತನವನ್ನು ಪ್ರಮಾಣೀಕರಿಸಿದೆ.
ಅಂಬೇಡ್ಕರ್ ಸರ್ಕಲ್ನಿಂದ ಸಬಗೇರಿವರೆಗಿನ ಬೆಲ್ ರಸ್ತೆಗೆ ಫೆಬ್ರವರಿಯಲ್ಲಿ ಮರು ಡಾಂಬರೀಕರಣ ಕಾಮಗಾರಿ ಮಾಡಲಾಗಿತ್ತು. ಫೆಬ್ರವರಿಯಲ್ಲಿ ನಡೆದ ಗ್ರಾಮದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗಿತ್ತು. ಶಾಸಕರ ಸೂಚನೆ ಮೇರೆಗೆ ಗುತ್ತಿಗೆದಾರರೊಬ್ಬರು ಈ ಕಾಮಗಾರಿ ಕೈಗೊಂಡಿದ್ದರು.
ಮೊದಲ ಮಳೆಗೇ ರಸ್ತೆಯ ಕಡಿ ಕಿತ್ತು ಹೋಗಿದೆ. ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಜಾತ್ರೆಗಾಗಿ ಮಾಡಿದ ರಸ್ತೆ ಕಾಮಗಾರಿ ಜಾತ್ರೆ ಮುಗಿದು 4 ತಿಂಗಳವರೆಗೆ ಬಾಳಿಕೆ ಬಂದದ್ದೇ ಹೆಚ್ಚು ಎಂದು ಜನತೆ ವ್ಯಂಗ್ಯವಾಡುವಂತಾಗಿದೆ.
ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಜನರು ಆಡಿಕೊಳ್ಳುವ ಮುನ್ನವೇ ರಸ್ತೆ ಉಸ್ತುವಾರಿಯಾಗಿರುವ ಲೋಕೋಪಯೋಗಿ ಇಲಾಖೆ ಜಾಣ್ಮೆ ತೋರಿದೆ. ‘ರಸ್ತೆಯ ಮೇಲ್ಪದರು ಕಿತ್ತು ಹೋಗಿದೆ. ನಿಧಾನವಾಗಿ ಚಲಿಸಿ’ ಎಂದು ಫಲಕ ಅಳವಡಿಸಿದೆ. ಸಬಗೇರಿ ಬಳಿ ಹಾಗೂ ಬಸ್ ನಿಲ್ದಾಣದ ಬಳಿ ಫಲಕ ಅಳವಡಿಸಲಾಗಿದೆ.
ಮಳೆಗಾಲ ಕಳೆಯುವವರೆಗೂ ಕಿತ್ತು ಹೋದ ಈ ರಸ್ತೆಯಲ್ಲೇ ಸವಾರರು ಬೀಳುತ್ತ, ಏಳುತ್ತ ಸಾಗುವುದು ಅನಿವಾರ್ಯವಾಗಿದೆ. ಮಳೆಗಾಲದ ನಂತರ ಮತ್ತೊಂದು ಕೋಟಿಂಗ್ ಡಾಂಬರು ಹಾಕಿ ಸಮಸ್ಯೆ ಪರಿಹರಿಸಬೇಕೆಂಬುದು ಜನತೆಯ ಆಗ್ರಹವಾಗಿದೆ.
ಈ ಕಾಮಗಾರಿಗಾಗಿ ಇಲಾಖೆಯಲ್ಲಿ ಯಾವುದೇ ಅನುದಾನ ಮಂಜೂರಾಗಿಲ್ಲ. ಕ್ರಿಯಾಯೋಜನೆ ರೂಪಿಸಿಲ್ಲ, ಬಿಲ್ ಸಹ ಮಾಡಿಲ್ಲ. ಜಾತ್ರೆಯ ವೇಳೆ ಶಾಸಕರ ಸೂಚನೆಯಂತೆ ಗುತ್ತಿಗೆದಾರರೇ ಕಾಮಗಾರಿ ನಡೆಸಿದ್ದರು. ಇದೀಗ ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜಾಗೃತಿಗಾಗಿ ಇಲಾಖೆಯಿಂದ ಫಲಕ ಅಳವಡಿಸಿದ್ದೇವೆ.ವಿ.ಎಂ. ಭಟ್ಟ ಲೋಕೋಪಯೋಗಿ ಇಲಾಖೆ ಎಇಇ ಗ್ರಾಮದೇವಿ ಜಾತ್ರೆಯ ಸಲುವಾಗಿ ಶಾಸಕರ ಸೂಚನೆಯಂತೆ ಬೆಲ್ ರಸ್ತೆ ಕಾಮಗಾರಿ ಕೈಗೊಂಡಿದ್ದೆವು. ಜಾತ್ರೆಯಲ್ಲಿ ಜನರಿಗೆ ಅನುಕೂಲ ಕಲ್ಪಿಸುವುದು ಶಾಸಕರ ಉದ್ದೇಶವಾಗಿತ್ತು. ಹೀಗಾಗಿ, ನಾವು ಅದಕ್ಕೆ ಬೆಂಬಲವಾಗಿ ಕಾಮಗಾರಿ ಮಾಡಿದ್ದೆವು. ಇದಕ್ಕೆ ಯಾವುದೇ ಅನುದಾನ ಬಂದಿಲ್ಲ. ಮುಂದೆ ರಸ್ತೆ ಕಾಮಗಾರಿಗೆ ಅನುದಾನ ಬಂದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.ಸುಧೀರ ಸಿದ್ದಾಪುರ ಗುತ್ತಿಗೆದಾರರ ಸಹಾಯಕ