

ಯಲ್ಲಾಪುರ: ತಾಲೂಕಿನಲ್ಲಿ ಈ ಬಾರಿ ಬರದ ಛಾಯೆ ಕಾಣಿಸಿಕೊಂಡಿದೆ. ಭತ್ತ, ಮುಸುಕಿನಜೋಳ, ಹತ್ತಿ ಹಾಗೂ ಕಬ್ಬು ಬೆಳೆ ಹಾನಿಯಾಗುವ ಲಕ್ಷಣ ಕಂಡು ಬರುತ್ತಿದೆ. ತಾಲೂಕಿನಲ್ಲಿ ವಾರ್ಷಿಕ ವಾಡಿಕೆ ಮಳೆ ಈವರೆಗೆ 2,222 ಮಿ.ಮೀ. ಆಗಬೇಕಿತ್ತು. ಆದರೆ, ಕೇವಲ 1,398 ಮಿ.ಮೀ. ಮಳೆ ಆಗಿದೆ. ಜೂನ್, ಜುಲೈನಲ್ಲಿ ಶೇ. 74 ಹಾಗೂ ಆಗಸ್ಟ್‌ನಲ್ಲಿ ಶೇ. 79ರಷ್ಟು ವಾಡಿಕೆ ಮಳೆ ಕೊರತೆಯಾಗಿದೆ. ಇದರಿಂದಾಗಿ ಪ್ರಮುಖ ಕೃಷಿ ಬೆಳೆಗಳಾದ ಭತ್ತ, ಮುಸುಕಿನ ಜೋಳ, ಕಬ್ಬು ಹಾಗೂ ಹತ್ತಿ ಇಳುವರಿ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ಈವರೆಗೆ ತಾಲೂಕಿನಲ್ಲಿ 2,224 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 373 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 152 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಹಾಗೂ 20 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೀಜ ಬಿತ್ತನೆಯಾಗಿದೆ. ಶೇ. 95ರಷ್ಟು ಬೀಜ ಬಿತ್ತನೆ ಹಾಗೂ ನಾಟಿಯಾಗಿದೆ. ನಾಟಿ ಮಾಡಿರುವ ರೈತರು ಬೆಳೆಗೆ ನೀರು ಕೊಡಲಾಗದೇ ಒದ್ದಾಡುತ್ತಿದ್ದಾರೆ. ಸಮೀಪದ ಜಲಮೂಲಗಳಿಂದ ನೀರು ಹಾಯಿಸುವ ಪ್ರಯತ್ನ ನಡೆಸಿದ್ದಾರೆ. ಬರ ಪರಿಸ್ಥಿತಿ ಕುರಿತು ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುತ್ತಿದ್ದು, ಅವರ ವರದಿ ಆಧರಿಸಿ ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಲಿದೆ.
ಬರ ಪರಿಸ್ಥಿತಿ ತಾಲೂಕಿನಲ್ಲಿ ರೈತರಿಗೆ ಸಮಸ್ಯೆ ತಂದೊಡ್ಡಿದೆ. ಬರಪೀಡಿತ ಪ್ರದೇಶಗಳ ಘೋಷಣೆಗೆ ಇರುವ ಮಾನದಂಡದನ್ವಯ ಸಮೀಕ್ಷೆ ನಡೆಯುತ್ತಿದೆ. ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ರೈತರಿಗೆ ನೆರವಾಗಲಿದೆ.ಎಂ. ಗುರುರಾಜ ತಹಸೀಲ್ದಾರ್