ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಯಲ್ಲಪ್ಪ

IMG-20240807-WA0050.jpg
Published on

ಬೆಳಗಾವಿ: ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ವಿದ್ಯುತ್ ಅವಘಡದಲ್ಲಿ ದುರಂತ ಸಾವು ಕಂಡ ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ (20) ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾರ್ಖಾನೆಯಲ್ಲಿ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಕಷ್ಟಪಟ್ಟು ದುಡಿದು ಮನೆಯವರನ್ನು ನೋಡಿಕೊಳ್ಳುತ್ತಿದ್ದ ಯುವಕ ಬೆಂಕಿಯ ಕೆನ್ನಾಲೆಯಲ್ಲಿ ಸುಟ್ಟು ಕರಕಲಾಗಿ ದುರಂತ ಅಂತ್ಯ ಕಂಡಿದ್ದಾನೆ. ವಯಸ್ಸಾದ ತಂದೆ-ತಾಯಿ, ಮೂವರು ಸಹೋದರಿಯರ ಪಾಲಿಗೆ ಆಧಾರಸ್ತಂಭವಾಗಿದ್ದ ಯುವಕನ ಬಾಳಲ್ಲಿ ವಿಧಿ ಅಟ್ಟಹಾಸ ಮೆರೆದಿದೆ. ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೆಲಸಕ್ಕೆ ಹೋಗಿದ್ದ ಮಗ ಮರಳಿ ಮನೆಗೆ ಬರುತ್ತಾನೆ ಎಂದು ಕಾಯುತ್ತ ಕುಳಿತಿದ್ದ ಹೆತ್ತವರಿಗೆ ಕೊನೆಯದಾಗಿ ಮುಖ ಸಹಿತ ನೋಡಲು ಆಗಿಲ್ಲ. ಕಾರ್ಖಾನೆಗೆ ಬೆಂಕಿ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ಯಲ್ಲಪ್ಪನ ಮನೆಯವರು ‘ನನ್ನ ಮಗನನ್ನು ಬದುಕಿಸಿ ಕೊಡಿ’ ಎಂದು ಅಂಗಲಾಚಿದ ದೃಶ್ಯ ಮನಕಲಕುವಂತಿತ್ತು.

ಚೀಲದಲ್ಲಿ ದೇಹದ ಅವಶೇಷ: ಮರಣೋತ್ತರ ಪರೀಕ್ಷೆ ಬಳಿಕ ಯಲ್ಲಪ್ಪನ ಮೃತ ದೇಹದ ಭಾಗಗಳನ್ನು ಚೀಲದಲ್ಲಿ ಮುಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಕೈಚೀಲದಲ್ಲಿ ಮಗನ ಮೃತದೇಹದ ಭಾಗಗಳನ್ನು ತೆಗೆದುಕೊಂಡು ಕಣ್ಣೀರು ಹಾಕುತ್ತ ತಂದೆ ಸಣ್ಣಗೌಡ ಅಂತ್ಯಕ್ರಿಯೆಗೆ ಹೋದರು. ಈ ಸ್ಥಿತಿ ಯಾರಿಗೂ ಬರಬಾರದು ಎಂದು ನೆರೆದವರು ಕಣ್ಣೀರಾದರು. ಸರ್ಕಾರ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಬಂಧಿ ಬಸವರಾಜ ಮಾಧ್ಯಮಗಳ ಎದುರು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net