ಯಲ್ಲಮ್ಮನವಾಡಿ-ಖೋತನಹಟ್ಟಿ ರಸ್ತೆ ಕೆಸರುಮಯ

23KOKATANUR2(2)-Web
ಯಲ್ಲಮ್ಮನವಾಡಿ ಗ್ರಾಮದಿಂದ ಖೋತನಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆಯಂತಾಗಿರುವುದು.
Published on

ಕೊಕಟನೂರ: ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮದಿಂದ ಖೋತನಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಲ್ಲಮ್ಮನವಾಡಿಯಿಂದ ಖೋತನಹಟ್ಟಿ ಗ್ರಾಮದವರೆಗೆ 8 ಕಿ.ಮೀ. ರಸ್ತೆ ಡಾಂಬರೀಕರಣವಾಗಿಲ್ಲ. ಇದರ ಪರಿಣಾಮ ಮಳೆಗಾಲದಲ್ಲಿ ಈ ರಸ್ತೆ ಕೆಸರು ಗದ್ದೆಯಂತೆ ಗೋಚರಿಸುತ್ತಿದೆ. ಸುಕ್ಷೇತ್ರ ಕೊಕಟನೂರ ಯಲ್ಲಮ್ಮದೇವಿ ಜಾತ್ರೆ ವೇಳೆ ರಸ್ತೆಯ ತಗ್ಗು- ಗುಂಡಿಗಳನ್ನು ಮೊರಮ್‌ನಿಂದ ಮುಚ್ಚಲಾಗಿತ್ತು. ಎರಡು ವರ್ಷದಿಂದ ಯಾವುದೇ ರೀತಿಯ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ.

ಇದರ ಪರಿಣಾಮ ರಸ್ತೆಯ ಬದಿ ಬೆಳೆದಿರುವ ಮುಳ್ಳಿನ ಕಂಟಿಗಳು ರಸ್ತೆಯನ್ನು ಆಕ್ರಮಿಸಿವೆ. ವಾಹನ ಸವಾರರು ತಗ್ಗು-ಗುಂಡಿ, ಗಿಡ-ಗಂಟಿಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುತ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು, ತೋಟದ ವಸತಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಕಾಮಗಾರಿ ಕೈಗೊಂಡು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ಒಂದು ವಾರದಿಂದ ಸುರಿಯುತ್ತಿರುವ ಮಳೆಯ ನೀರು ರಸ್ತೆ ಮಧ್ಯ ಸಂಗ್ರಹವಾಗುತ್ತಿದೆ. ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಈ ರಸ್ತೆ ದುರಸ್ತಿಗೊಳಿಸದಿದ್ದರೆ ಜಿಪಂ ಕಚೇರಿ ಎದುರು ಹೋರಾಟ ನಡೆಸುತ್ತೇವೆ.| ಅಪ್ಪಾಸಾಬ ನಾವ್ಹಿ ಸ್ಥಳೀಯ ನಿವಾಸಿರಸ್ತೆ ಡಾಂಬರೀಕಣ ಮಾಡಲು ಹಲವು ಬಾರಿ ಪ್ರಸ್ತಾವನೆ ಕಳುಹಿಸಿದರೂ ಹಣ ಮಂಜೂರಾಗಿಲ್ಲ. ಹೀಗಾಗಿ ರಸ್ತೆ ದುರಸ್ತಿಯಾಗಿಲ್ಲ. ಹಣ ಮಂಜೂರಿಗೆ ಸ್ಥಳೀಯ ಶಾಸಕರು ಮತ್ತು ಜಿಪಂ ಸದಸ್ಯರ ಸಹಕಾರ ಬೇಕು. ಅಲ್ಲಿಯವೆರೆಗೆ ತಾತ್ಕಾಲಿಕವಾಗಿ ರಸ್ತೆ ರಿಪೇರಿ ಮಾಡಿ, ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ.| ಶಂಕರ ಸಾಂವಗಾಂವ ಜಿಪಂ ಸಹಾಯಕ ಅಭಿಯಂತರ ಅಥಣಿ

| ಮೋಹನ ಪಾಟಣಕರ ಕೊಕಟನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net