ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ ಪ್ಲ್ಯಾನ್ ಸಿದ್ಧ

05Jaggu3
ಪ್ರವಾಸೋದ್ಯಮ ಇಲಾಖೆಯು ಬೆಳಗಾವಿ ಜಿಲ್ಲೆಯ ಪ್ರವಾಸಿತಾಣಗಳ ಕುರಿತು ಹೊರತಂದ ಮಾಹಿತಿ ಪುಸ್ತಕವನ್ನು ಸಚಿವ ಎಚ್.ಕೆ.ಪಾಟೀಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸೌಮ್ಯಾ ಬಾಪಟ, ಡಾ.ಭೀಮಾಶಂಕರ ಗುಳೇದ, ಗೀತಾ ಕೌಲಗಿ ಇದ್ದರು.
Published on

ಬೆಳಗಾವಿ: ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ 100 ಕೋಟಿ ಅನುದಾನ ಮಂಜೂರಾಗಿದೆ. ಪ್ರಸಾದ ಯೋಜನೆಯಡಿಯೂ 20 ಕೋಟಿ ಅನುದಾನ ದೊರೆತಿದೆ. ಜತೆಗೆ ರಾಜ್ಯ ಸರ್ಕಾರವು ವಿವಿಧ ಯೋಜನೆಗಳಡಿ ಅನುದಾನ ನೀಡಿ ಗುಡ್ಡದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ವಸತಿ ಗೃಹ, ದಾಸೋಹ ಭವನ ಮತ್ತಿತರ ಮೂಲಸೌಕರ್ಯ ಒಳಗೊಂಡ ಮಾಸ್ಟರ್ ಪ್ಲ್ಯಾನ್ ಬಹುತೇಕ ಸಿದ್ಧಗೊಂಡಿದೆ. ಅದನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರಿಂದಲೂ ಸಲಹೆ ಸ್ವೀಕರಿಸುತ್ತೇವೆ ಎಂದರು.

ದರ್ಶನಕ್ಕಾಗಿ ಎಲ್‌ಇಡಿ ಪರದೆ: ಭಾರತ ಹುಣ್ಣಿಮೆ ಅಂಗವಾಗಿ ಯಲ್ಲಮ್ಮನಗುಡ್ಡದಲ್ಲಿ ಫೆ.12ರಂದು ಬೃಹತ್ ಜಾತ್ರೆ ನಡೆಯಲಿದ್ದು, 10 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಲಿದ್ದಾರೆ. ಪ್ರತಿವರ್ಷ ನೂಕುನುಗ್ಗಲು ಆಗುತ್ತದೆ. ಈ ಬಾರಿ ಜಿಲ್ಲಾಡಳಿತದ ವತಿಯಿಂದ ಭಕ್ತರಿಗೆ ಹೆಚ್ಚಿನ ಮೂಲಸೌಲಭ್ಯ ಕಲ್ಪಿಸಲು ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು. ಜನಸಂದಣಿ ನಿರ್ವಹಿಸುವುದರ ಜತೆಗೆ, ದೇವಿ ದರ್ಶನಕ್ಕಾಗಿ ಎಲ್‌ಇಡಿ ಪರದೆ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಗತ್ಯ ಶೌಚಗೃಹ: ಗುಡ್ಡದಲ್ಲಿ ಭಕ್ತರು ಬಯಲು ಶೌಚಕ್ಕೆ ಹೋಗುವ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ್ದೇವೆ. ಭಕ್ತರ ಸಂಖ್ಯೆಗೆ ತಕ್ಕಂತೆ ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಭೆಯಲ್ಲೂ ಈ ಬಗ್ಗೆ ಚರ್ಚಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಯಲ್ಲಮ್ಮನಗುಡ್ಡದಲ್ಲಿ ದಾಸೋಹ ಭವನ, ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಲ್ಲೇ ಶಂಕುಸ್ಥಾಪನೆ ನೆರವೇರಿಸಲು ಪ್ರಯತ್ನ ನಡೆದಿದೆ ಎಂದರು.

ಇದೇ ವೇಳೆ ಬೆಳಗಾವಿಪ್ರವಾಸೋದ್ಯಮ ಇಲಾಖೆ ಜಿಲ್ಲೆಯ ಪ್ರವಾಸಿತಾಣಗಳ ಕುರಿತು ಹೊರತಂದಿರುವ ಮಾಹಿತಿ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಂಡಳಿ ಆಯುಕ್ತೆ ಗೀತಾ ಕೌಲಗಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯಾ ಬಾಪಟ ಇತರರಿದ್ದರು.

ರೋಪ್‌ವೇ ಯೋಜನೆಗೆ ಸರ್ವೆ ಕಾರ್ಯ

ಗೋಕಾಕ ಜಲಪಾತದಲ್ಲಿ ರೋಪ್‌ವೇ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಸರ್ವೆ ನಡೆದಿದೆ. ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದಲ್ಲಿ 18 ಕಿ.ಮೀ ಪ್ರದೇಶವನ್ನು ಸಫಾರಿಗಾಗಿ ಮುಕ್ತಗೊಳಿಸಲಾಗುತ್ತಿದೆ. ಅಲ್ಲಿ ಸಫಾರಿ ಆರಂಭವಾದ ನಂತರ, ಭೀಮಗಡ ಅತ್ಯಾಕರ್ಷಕ ಪ್ರವಾಸಿತಾಣವಾಗಿ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net