

ಆನೇಕಲ್: ಆನೇಕಲ್ ತಾಲೂಕಿನ ಮಾಯಸಂದ್ರದಲ್ಲಿ ಅವಧೂತ ಪಿಳ್ಳಪ್ಪಸ್ವಾಮಿ 61ನೇ ಆರಾಧನಾ ಮಹೋತ್ಸವ ಪ್ರಯುಕ್ತ ಯಲ್ಲಮ್ಮ ದೇವಿ ಕರಗ ಉತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಮುಂಜಾನೆ, 4 ಗಂಟೆಗೆ ಕರಗ ಹೊತ್ತ ಪೂಜಾರಿ ನಾದಸ್ವರ ಹಾಗೂ ಗಂಟೆಯ ನಾದಕ್ಕೆ ದೇವಾಲಯದಿಂದ ಹೊರ ಬರುತ್ತಿದ್ದಂತೆ ದೇವಾಲಯದ ಎದುರು ನೆರೆದಿದ್ದ ವೀರಕುಮಾರರು ಅಲಗು ಸೇವೆ ಸಲ್ಲಿಸಿದರು.
ಪಲ್ಲಕ್ಕಿಗಳು ದೇವಾಲಯದ ಬಳಿ ಆಗಮಿಸಿ ಕರಗ ಹೊತ್ತ ಪೂಜಾರಿ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಸಂಚಾರ ಮಾಡುತ್ತಿದ್ದ ವೇಳೆ ಗ್ರಾಮದಲ್ಲಿ ಮಹಿಳೆಯರು ಮನೆಯ ಮುಂದೆ ರಂಗೋಲಿ ಹಾಕಿ ಪೂಜೆ ಸಲ್ಲಿಸಿದರು.
ಕರಗ ದೇವಾಲಯದಿಂದ ಹೊರಬಂದು ದೇವಾಲಯದ ಮುಂದೆ ಪ್ರದಕ್ಷಿಣೆ ಹಾಕಿ ಬಳಿಕ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ಮತ್ತೆ ಬೆಳಗ್ಗೆ 6 ಗಂಟೆಗೆ ಮರಳಿ ದೇವಾಲಯಕ್ಕೆ ವಾಪಸ್ ಆಯಿತು.
ಕರಗ ಉತ್ಸವದ ವೇಳೆ ಮಳೆ ಆಗುತ್ತಿದ್ದರೂ ಜನ ಲೆಕ್ಕಿಸದೆ ಉತ್ಸವದ ಜತೆ ಸಾಗಿದರು.
ಉತ್ಸವದ ಅಂಗವಾಗಿ ಭಾನುವಾರ ರಾತ್ರಿ ಹರಿಕಥೆ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಧು ಸಂತರು ಭಾಗಿಯಾಗಿದ್ದರು.
ಪಿಳ್ಳಪ್ಪಸ್ವಾಮಿ ಅವರ 61ನೇ ಆರಾಧನಾ ಮಹೋತ್ಸವ
ಶ್ರೀ ಸಚ್ಚಿದಾನಂದ ಅವಧೂತ ಪಿಳ್ಳಪ್ಪಸ್ವಾಮಿ 61ನೇ ಆರಾಧನಾ ಮಹೋತ್ಸವ ಭಾನುವಾರ ನಡೆಯಿತು. ತಾಲೂಕು ಸೇರಿ ವಿವಿಧ ಭಾಗಗಳಿಂದ ನೂರಾರು ಮಂದಿ ಸಾಧು ಸಂತರು ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಪಿಳ್ಳಪ್ಪಸ್ವಾಮಿ ಆಶ್ರಮದ ಅಧ್ಯಕ್ಷ ಎಂ.ವಿ.ಮಂಜುನಾಥ್ ಮಾತನಾಡಿ, 1963ರಲ್ಲಿ ಸಚ್ಚಿದಾನಂದ ಅವಧೂತ ಪಿಳ್ಳಪ್ಪ ಸ್ವಾಮಿಗಳು ಜೀವ ಸಮಾಧಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅವರ ಆರಾಧನ ಮಹೋತ್ಸವ ನಡೆಸಲಾಗುತ್ತದೆ. ರಾಜ್ಯದ ವಿವಿಧೆಡೆಯಿಂದ ಸಂತರು ಆಗಮಿಸುವುದು ಆರಾಧನೆಯ ವಿಶೇಷ ಎಂದರು.
ಆಶ್ರಮದ ಪದಾಧಿಕಾರಿಗಳಾದ ರಾಜಪ್ಪ, ವೆಂಕಟೇಶ್, ಮಂಜುನಾಥ್, ಅನಂತ್, ಕೃಷ್ಣಪ್ಪ, ರಾಮಸ್ವಾಮಿ, ಸಂಪಂಗಿಸ್ವಾಮಿ, ಗುಳ್ಳಪ್ಪ, ಮುನಿಸ್ವಾಮಿ, ಮುನಿಯಪ್ಪ, ದೊಮ್ಮಸಂದ್ರ ಧನರಾಜ್, ಚುಟುಕು ಶಂಕರ್ ಇದ್ದರು.