ಕಂಪ್ಯೂಟರ್, ಆಂಗ್ಲ ಶಿಕ್ಷಣ ಅಗತ್ಯ: ಲಯನ್ಸ್ ಮಾಜಿ ಗವರ್ನರ್ ವಿ.ನಾಗರಾಜು ಹೇಳಿಕೆ

Yaliyur Government School Environmental awareness Mandya
Published on

ಮಂಡ್ಯ: ಸರ್ಕಾರಿ ಶಾಲೆಗಳು ಸಬಲೀಕರಣವಾಗಬೇಕಾದರೆ ಕಂಪ್ಯೂಟರ್ ಹಾಗೂ ಇಂಗ್ಲೀಷ್ ಶಿಕ್ಷಣ ಅಗತ್ಯ ಎಂದು ಲಯನ್ಸ್ ಸಂಸ್ಥೆ ಮಾಜಿ ಗವರ್ನರ್ ವಿ.ನಾಗರಾಜು ಹೇಳಿದರು.

ತಾಲೂಕಿನ ಯಲಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಪರಿಸರ ಜಾಗೃತಿ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹಾಗೂ ಇಂಗ್ಲಿಷ್ ಶಿಕ್ಷಣ ಬೇಕು. ಮನುಷ್ಯ ತೆಗೆದುಕೊಳ್ಳುವ ಆಹಾರ ಪದ್ಧತಿ ಸೇವಿಸುವ ಗಾಳಿಯಿಂದ ಮನಸ್ಸಿನ ಶಕ್ತಿ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರದ ಬಗ್ಗೆ ತಿಳಿದುಕೊಂಡು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸುವ ವಿದ್ಯಾರ್ಥಿಗಳು ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಇದ್ದಾರೆ. ಇಂತಹ ಸಾಧನೆ ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಕನಸಾಗಿದೆ. ಮಂಡ್ಯ ಜಿಲ್ಲೆ ಕನ್ನಡ ಭಾಷೆಯಲ್ಲಿ ಪಾಂಡಿತ್ಯ ತೆಗೆದುಕೊಂಡು ಕರ್ನಾಟಕಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಸರ್ಕಾರಿ ಶಾಲೆಗಳು ಸಬಲೀಕರಣ ಆಗಲಿಲ್ಲವೆಂದರೆ ಗ್ರಾಮೀಣ ಭಾಗದ ಮಕ್ಕಳು, ಬಡವರು, ನಿರ್ಗತಿಕರಿಗೆ ಶಿಕ್ಷಣ ಸಿಗುವ ಅವಕಾಶ ಕಡಿಮೆ. ಖಾಸಗಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ಡೊನೇಶನ್ ಕೊಟ್ಟು ಓದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಊರಿನಲ್ಲಿ ಹುಟ್ಟಿದವರು ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವನ್ನು ಮಾಡಬೇಕು. ಜತೆಗೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಎಳೆದು ತರುವ ಕೆಲಸವನ್ನು ಊರಿನ ಜನರು ಮಾಡಬೇಕು ಆಗ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ ಎಂದರು.

ಹವಾಮಾನ ವೈಪರಿತ್ಯ ಮುಗಿಲು ಮುಟ್ಟಿದೆ. ವಾತಾವರಣದಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಖಾಲಿ ಜಾಗಗಳಲ್ಲಿ ಕಿರು ಅರಣ್ಯ ಮಾಡುವ ಪ್ರಯತ್ನವನ್ನು ಮಾಡಬೇಕು. ಪರಿಸರದ ಉಳಿವು ಒಬ್ಬರು ಮಾಡುವ ಕೆಲಸವಲ್ಲ, ಇಡೀ ಸಮುದಾಯ ಮಾಡುವ ಕೆಲಸವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರದ ಪ್ರಜ್ಞೆ ಬೆಳೆಸಿಕೊಂಡು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸ ಮಾಡಿ ಎಂದು ಹೇಳಿದರು.

ಕೃಷಿಕ ಲಯನ್ಸ್ ಸಂಸ್ಥೆ ನಿರ್ದೇಶಕಿ ವೈ.ಎಚ್.ರತ್ನಮ್ಮ, ಮುಖ್ಯಶಿಕ್ಷಕ ಎಚ್.ಆರ್.ಅನಂತರಾಮು, ತೋಟಗಾರಿಕೆ ಇಲಾಖೆಯ ಪುರುಷೋತ್ತಮ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಶಿಕ್ಷಕಿ ಪೂರ್ಣಿಮಾ, ಹೇಮಂತ್ ಇದ್ದರು. ಇದೇ ಸಂದರ್ಭದಲ್ಲಿ ಕೃಷಿಕ ಲಯನ್ ಸಂಸ್ಥೆ ವತಿಯಿಂದ ಯಲಿಯೂರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಾಯಧನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net