ಒಂದು ತಿಂಗಳಿಂದ ಯಲ್ದೂರು ಪೊಲೀಸ್​ ಠಾಣೆಗೆ ಬೀಗ

Published on

ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಹೋಬಳಿ ಕೇಂದ್ರ ಸ್ಥಾನದಲ್ಲಿ ಬ್ರಿಟಿಷ್​ ಕಾಲದಲ್ಲಿ ಸ್ಥಾಪನೆಯಾಗಿದ್ದ ಪೊಲೀಸ್​ ಹೊರಠಾಣೆ ಸತತ ಒಂದು ತಿಂಗಳಿಂದ ಮುಚ್ಚಲಾಗಿದ್ದು, ಠಾಣಾಧಿಕಾರಿಗಳು ಇಲ್ಲದ ಕಾರಣ ಈ ಭಾಗದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಯಲ್ದೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲ್ದೂರು ಸೇರಿ 36 ಹಳ್ಳಿಗಳಲ್ಲಿ ಸಮಸ್ಯೆ ಉದ್ಭವಿಸಿದಾಗ ಪೊಲೀಸ್​ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಿದ್ದರು. ಕಷ್ಟಕರ ಸಮಸ್ಯೆ ಎದುರಾದಾಗ ಶ್ರೀನಿವಾಸಪುರ ಪೊಲೀಸ್​ ಠಾಣೆಗೆ ವರ್ಗಾಯಿಸುತ್ತಿದ್ದರು. ಯಲ್ದೂರಿನಲ್ಲಿ 3&4 ವರ್ಷಗಳ ಹಿಂದೆ ಮನೆ ಕಳವು ಹಾಗೂ ಸರಗಳ್ಳತನ ಹೆಚ್ಚಾದಾಗ ಬಂದೋಬಸ್ತ ಮಾಡಿದ್ದರು. ಆದರೆ ಈಗ ಠಾಣೆಯೇ ಮುಚ್ಚಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಠಾಣೆಯಲ್ಲಿ ಒಬ್ಬರು ಎಎಸ್​ಐ, ಇಬ್ಬರು ಮುಖ್ಯ ಪೇದೆಗಳ ಜತೆಗೆ ಇಬ್ಬರು ಪೇದೆಗಳು ಕರ್ತವ್ಯ ನಿರ್ವಹಿಸುವ ಅವಕಾಶ ಇದ್ದರೂ, ಕಳೆದ ಒಂದೆರಡು ವರ್ಷಗಳಿಂದ ಎಎಸ್​ಐ ಶ್ರೀನಿವಾಸ್​ ಮುಖ್ಯಪೇದೆ ಆನಂದ್​ ನಿಷ್ಠ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಈ ಠಾಣೆಗೆ ಬೀಗ ಜಡಿದಿದ್ದಾರೆ.

ಈ ನಿಟ್ಟಿನಲ್ಲಿ ಶ್ರೀನಿವಾಸಪುರ ಪೊಲೀಸ್​ ಠಾಣೆ ವೃತ್ತ ನಿರೀಕ್ಷಕ ಮಹಮ್ಮದ್​ ಗೋರವನಕೊಳ್ಳ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕೂಳ್ಳಗುರ್ಕಿ ಜಾತ್ರೆ ಹಾಗೂ ಬೇರೆಬೇರೆ ಚುನಾವಣೆಗೆ ಇಲ್ಲಿನ ಸಿಬ್ಬಂದಿ ನಿಯೋಜನೆ ಮಾಡಿದ್ದು, ಶ್ರೀದಲ್ಲಿ ಯಲ್ದೂರು ಠಾಣೆಗೆ ಕರ್ತವ್ಯ ನಿರ್ವಹಿಸಲು ಕಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಯಲ್ದೂರು ಠಾಣೆಗೆ ನಿಷ್ಠಾವಂತ ಕಾಯಂ ಸಿಬ್ಬಂದಿ ನೇಮಕ ಮಾಡಬೇಕು. ಗ್ರಾಮದ ಸರ್ವೇ ನಂ. 8ರ ಗುಂಟೆ ಜಮೀನನ್ನು ಪೊಲೀಸ್​ ಠಾಣೆ ಹಾಗೂ ಪೊಲೀಸ್​ ವಸತಿ ಗೃಹಗಳಿಗೆ ಮೀಸಲಿಟ್ಟು ಸಾರ್ವಜನಿಕರ ಸೇವೆಗೆ ಬಳಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net