ಶೂ-ಸಾಕ್ಸ್ ವಿತರಣೆಗೆ ಗ್ರಹಣ

ylb-1
ಯಲಬುರ್ಗಾ ಬಿಇಒ ಕಚೇರಿ ನೋಟ.
Published on

ಯಲಬುರ್ಗಾ: ಪ್ರಸಕ್ತ ಅರ್ಧವಾರ್ಷಿಕ ಅವಧಿ ಕಳೆಯುತ್ತಾ ಬಂದರೂ ತಾಲೂಕಿನಾದ್ಯಂತ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಯಾಗದೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ವಿದ್ಯಾವಿಕಾಸ’ಕ್ಕೆ ಗ್ರಹಣ ಹಿಡಿದಿದೆ.

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದ ಶೈಕ್ಷಣಿಕ ಅವಧಿಯಲ್ಲಿ ಉಚಿತ ಪಠ್ಯ-ಪುಸ್ತಕ, ಸಮವಸ್ತ್ರಗಳ ವಿತರಣೆ ಜತೆಗೆ ಒಂದು ಜತೆ ಶೂ, ಎರಡು ಜತೆ ಸಾಕ್ಸ್ ವಿತರಿಸುವ ವಿದ್ಯಾವಿಕಾಸ ಯೋಜನೆಗೆ 2015-16ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

1ರಿಂದ 5ನೇ ತರಗತಿ ಮಕ್ಕಳಿಗೆ 265 ರೂ., 6 ರಿಂದ 8ನೇ ತರಗತಿಯವರಿಗೆ 295 ರೂ., 9 ರಿಂದ 10ನೇ ತರಗತಿ ಮಕ್ಕಳಿಗೆ 325 ರೂ. ನೀಡಲಾಗುತ್ತದೆ. ಈ ಯೋಜನೆಗೆ ತಗಲುವ ವೆಚ್ಚವನ್ನು ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಿಡಿಪಿಐ ಖಾತೆಗೆ ಜಮೆ ಮಾಡಲಾಗುತ್ತಿತ್ತು.

ಅಲ್ಲಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಖಾತೆಗೆ ವರ್ಗಾಯಿಸಿ ಶಾಲಾ ಎಸ್‌ಡಿಎಂಸಿ ಖಾತೆಗೆ ನೇರ ಜಮೆ ಮಾಡಿದ ಬಳಿಕ ಟೆಂಡರ್ ಕರೆಯಲಾಗುತ್ತಿತ್ತು. ಹಾಗೆಯೇ ಪ್ರತಿವರ್ಷ ಜುಲೈ ಅಥವಾ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆ ಆಗುತ್ತಿದವು. ಆದರೆ, ಈ ಬಾರಿ ಅರ್ಧವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದರೂ ಮಕ್ಕಳ ಕಾಲಿಗೆ ಶೂ ದೊರೆತಿಲ್ಲ.

ಅಕೌಂಟ್-ಐಎಫ್‌ಎಸ್‌ಸಿ ಅನ್‌ಲಿಂಕ್: ಹೊರ ಜಿಲ್ಲೆ ಮತ್ತು ತಾಲೂಕುಗಳ ಬಹುತೇಕ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಈಗಾಗಲೇ ಅನುದಾನ ಮಂಜೂರಾಗಿದೆ. ಆದರೆ, ಯಲಬುರ್ಗಾ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನುದಾನ ನೀಡುವುದು ಬಾಕಿಯಿದ್ದು, ಕೆಲವೊಂದು ಶಾಲೆಗಳ ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ ಸಂಖ್ಯೆ ಲಿಂಕ್ ಆಗದ ಕಾರಣ ಶೂ ವಿತರಣೆಗೆ ವಿಳಂಬವಾಗಿದೆ ಎನ್ನಲಾಗಿದೆ.

ಪಾಲಕರ ಅಸಮಾಧಾನ: ಬಿಎಂಎಸ್ ನೂತನ ತಂತ್ರಾಂಶ ಮೂಲಕ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ಮಾಹಿತಿ ಆಧರಿಸಿ ಆಯಾ ಇಲಾಖೆಗಳಿಂದ ಅನುದಾನ ಪಡೆದ ಬಳಿಕ ಎಲ್ಲ ಶಾಲೆಗಳ ಎಸ್‌ಡಿಎಂಸಿ ಖಾತೆಗಳಿಗೆ ಯೋಜನೆಗೆ ತಗುಲುವ ವೆಚ್ಚವನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಹಂತಗಳಲ್ಲಿ ಜಮೆ ಮಾಡಲಾಗುತ್ತಿದೆ.

ಪರಿಣಾಮ ಬಹುತೇಕ ಶಾಲೆಗಳ ಹೆಸರು, ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ, ರೆಸಿಪೆಂಟ್ ಐಡಿ ನಂಬರ್ ಹೊಂದಾಣಿಕೆ ಆಗುತ್ತಿಲ್ಲ. ಎಲ್ಲ ದಾಖಲಾತಿ ಸರಿಪಡಿಸಿಕೊಳ್ಳಲು ನಾಲೈದು ಬಾರಿ ಮಾಹಿತಿ ಕೇಳಿದ್ದರಿಂದ ಇಲಾಖೆ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಇದು ಶಾಲಾ ಮಕ್ಕಳು, ಪಾಲಕರ ಅಸಮಾಧಾನಕ್ಕೂ ಕಾರಣವಾಗಿದೆ.

====

ಈಗಾಗಲೇ ಎಲ್ಲ ಶಾಲೆಗಳ ಬ್ಯಾಂಕ್ ಖಾತೆಗೆ ಶೂ-ಸಾಕ್ಸೃ್ ಖರೀದಿಗಾಗಿ ಸರ್ಕಾರದಿಂದ ನೇರ ಹಣ ಜಮೆ ಮಾಡಲಾಗಿದೆ. ಶೂ-ಸಾಕ್ಸ್ ಗುಣಮಟ್ಟ ನೋಡಿ ಶಾಲಾ ಮೇಲುಸ್ತುವಾರಿ ಸಮಿತಿಗೆ ವಿತರಣೆ ಮಾಡಲು ಸೂಚಿಸಲಾಗಿದೆ. ಶೀಘ್ರವೇ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಲಾಗುವುದು.

> ಅಶೋಕ ಗೌಡರ, ಪ್ರಭಾರ ಬಿಇಒ, ಯಲಬುರ್ಗಾ

====

ಪ್ರತಿ ಬಾರಿ ಪೂರೈಕೆದಾರರು ಕಳಪೆ ಗುಣಮಟ್ಟದ ಶೂ-ಸಾಕ್ಸ್ ವಿತರಿಸುತ್ತಾರೆ. ಇದರ ಬಗ್ಗೆ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ, ಮಕ್ಕಳಿಗೆ ಗುಣಮಟ್ಟದ ಶೂ-ಸಾಕ್ಸ್ ವಿತರಣೆಗೆ ಕ್ರಮ ಕೈಗೊಳ್ಳಬೇಕು.

> ಶಿವಕುಮಾರ ನಾಗನಗೌಡ, ಪಾಲಕ, ಹೊಸಳ್ಳಿ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net