ನ್ಯಾಯಾದಾನ ವಿಳಂಬದಿಂದ ಭ್ರಷ್ಟರಿಗೆ ವರ

Yelburga book release
ಯಲಬುರ್ಗಾದಲ್ಲಿ ಸೋಮವಾರ ಪಲ್ಲೇದ ಕುಟುಂಬದಿಂದ ಹಮ್ಮಿಕೊಂಡಿದ್ದ ನಿವೃತ್ತ ನ್ಯಾಯಾಧೀಶ ಎಸ್.ಪಿ.ಪಲ್ಲೇದ ಅವರ ಆತ್ಮಕಥನ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ಎನ್.ಸಂತೋಷ ಹೆಗಡೆ ಉದ್ಘಾಟಿಸಿದರು. ಗುರುಪಾದ ದೇವರು, ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಇತರರಿದ್ದರು.
Published on

ಯಲಬುರ್ಗಾ: ದೇಶದ ಅಭಿವೃದ್ಧಿ ಜತೆಗೆ ಕಾಲಕಾಲಕ್ಕೆ ಅಧಿಕಾರ ನಡೆಸುವವರ ದುರಾಸೆಯೂ ವ್ಯಾಪಕವಾಗಿ ಹೆಚ್ಚಾಗಿದೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ ಹೆಗಡೆ ಕಳವಳ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ನಿವೃತ್ತ ನ್ಯಾಯಾಧೀಶ ಎಸ್.ಪಿ.ಪಲ್ಲೇದ ಅವರ ಆತ್ಮಕಥನ ಗ್ರಂಥ ಬಿಡುಗಡೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದುರಾಸೆ ದೇಶದ ಉಜ್ವಲ ಪ್ರಗತಿಗೆ ಮಾರಕವಾಗಿ ಪರಿಣಮಿಸುವ ಮುನ್ನ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಎಂದರು.

ಈ ಹಿಂದೆ ತಪ್ಪು ಮಾಡಿದವರನ್ನು ಸಮಾಜ ಗೌರವಿಸುತ್ತಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಪ್ಪು ಮಾಡಿ, ಜೈಲಿಗೆ ಹೋಗಿ, ಜಾಮೀನು ಮೇಲೆ ಬಿಡುಗಡೆಯಾಗಿ ಬಂದವರನ್ನು ಸಾರ್ವಜನಿಕವಾಗಿ ಸಾಧನೆ ಮಾಡಿ ಬಂದವರಂತೆ ಮೆರವಣಿಗೆ ಮಾಡುತ್ತಿರುವುದು ತಲೆ ತಗ್ಗಿಸಬೇಕಾದ ಸಂಗತಿಯಾಗಿದೆ. 50ರ ದಶಕದಲ್ಲಿ ಲಕ್ಷ ರೂ.ಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಇಂದು ಸಾವಿರಾರು ಕೋಟಿ ರೂ.ಗಳಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ಅಧಿಕಾರಸ್ಥರ ಮನೆ ಸೇರುತ್ತಿದೆ. ದೇಶದ ಸದ್ಯದ ಕಾನೂನಿನಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ. ನ್ಯಾಯಾಧಾನ ವಿಳಂಬ ಅಧಿಕಾರಸ್ಥರಿಗೆ, ಭ್ರಷ್ಟಾಚಾರಿಗಳಿಗೆ ವರದಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೊಬ್ಬರನ್ನು ತುಳಿದು ಶ್ರೀಮಂತರಾಗುವ ದರಲ್ಲಿ ಅರ್ಥವಿಲ್ಲ. ಶಾಲೆಗಳಲ್ಲಿ ನೈತಿಕ ಶಿಕ್ಷಣ ಇಲ್ಲ. ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಯುವ ಜನಾಂಗ ಮುಂದೆ ಬರಬೇಕಾಗಿದೆ. ಮಾನವರಾದವರಿಗೆ ಮಾನವೀಯ ಮೌಲ್ಯಗಳು ಮುಖ್ಯ. ಗಂಭೀರ ಸ್ವರೂಪದ ರೋಗಗಳಿಗೆ ಔಷದ ದೊರೆಯಬಹುದು. ಆದರೆ, ದುರಾಸೆಗೆ ಔಷಧಿಯೇ ಇಲ್ಲ. ಇರುವುದರಲ್ಲಿಯೇ ತೃಪ್ತಿ ಪಡುವುದೇ ದುರಾಸೆಗೆ ದಿವ್ಯ ಔಷಧಿ. ಆಧುನಿಕ ಸಮಾಜದಲ್ಲಿ ಮಾನವೀಯತೆ ಎಲ್ಲಿದೆ ಎಂಬುದನ್ನು ಹುಡುಕಬೇಕಿದೆ. ಸಮಾಜದಲ್ಲಿ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ಎಂಬ ಭಾವನೆ ಎಲ್ಲರಲ್ಲಿ ಮೂಡಲಿ ಎಂದು ಹೇಳಿದರು.

ರೋಣದ ಗುಲಗಂಜಿ ಮಠದ ಗುರುಪಾದ ದೇವರು, ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ನಿವೃತ್ತ ನ್ಯಾ. ಎಸ್.ಜಿ.ಪಲ್ಲೇದ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ, ಜಿ.ಬಿಪಾಟೀಲ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ನ್ಯಾಯಾಧೀಶರು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net