ಜಾತ್ರೆಗಳಿಂದ ಮೂಡಲಿದೆ ಸಾಮರಸ್ಯ ಭಾವನೆ

Untitled design (49)
Published on

ಯಲಬುರ್ಗಾ: ಧಾರ್ಮಿಕ ಚಟುವಟಿಕೆಗಳಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಲು ಸಾಧ್ಯ ಎಂದು ನಿಡಶೇಷಿ ಅಭಿನವ ಕರಿಬಸವ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಬುಧವಾರ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ, ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಭಕ್ತಿಯ ಮಾರ್ಗದಲ್ಲಿ ನಡೆಯಬೇಕು. ಧಾರ್ಮಿಕ ಸಭೆ, ಸಮಾರಂಭಕ್ಕೆ ಹಿರೇಅರಳಿಹಳ್ಳಿ ಗ್ರಾಮ ಸದಾ ಮುಂಚೂಣಿಯಲ್ಲಿರುತ್ತದೆ. ಎಲ್ಲರೂ ಒಗ್ಗಟ್ಟಾಗಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಒತ್ತಡದಲ್ಲಿ ಜೀವನ ಕಳೆಯುತ್ತಿದ್ದಾರೆ. ಜಾತ್ರಾ ಮಹೋತ್ಸವಗಳಿಂದ ಎಲ್ಲರಲ್ಲೂ ಸಾಮರಸ್ಯ ಮೂಡುತ್ತದೆ. ಅಲ್ಲದೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಜೀವನದಲ್ಲಿ ದಾನ, ಧರ್ಮ, ಸತ್ಕಾರ್ಯ ಮಾಡುವ ಮೂಲಕ ಎಲ್ಲರೂ ಪುಣ್ಯ ಪಡೆದುಕೊಳ್ಳಬೇಕು. ಅದು ಮುಂದಿನ ಜೀವನಕ್ಕೆ ದಾರಿಯಾಗುತ್ತದೆ ಎಂದು ತಿಳಿಸಿದರು.

ನವ ದಂಪತಿಗಳು ಆದರ್ಶ ಬದುಕನ್ನು ಕಟ್ಟಿಕೊಂಡು ಎಲ್ಲರಿಗೂ ಪ್ರೇರಣೆಯಾಗಲಿ. ಮಕ್ಕಳಿಗೆ ಗುರು-ಹಿರಿಯನ್ನು ಗೌರವಿಸುವ ಗುಣ ಮನೋಭಾವನೆಗಳನ್ನು ಬೆಳಸಬೇಕು ಜೊತೆಗೆ ಒಳ್ಳೆಯ ಸಂಸ್ಕಾರ ತಿಳಿಸಿಕೊಡಬೇಕು. ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಪುಣ್ಯಪ್ರಾಪ್ತಿಯಾಗಲಿದೆ ಎಂದರು. ಪುರಾಣಪ್ರವಚನಕಾರ ವೇದಮೂರ್ತಿ ಶಿವಕುಮಾರ ಶಾಸ್ತ್ರಿ, ತಬಲವಾದಕ ದೇವರಡ್ಡಿ ಹುಂಡೇಕಲ್, ಮಣಿಕಂಠ ರಾಜಾಪೂರ ಸೇರಿ ಇತರರಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 16 ಜೋಡಿ

ಜಾತ್ರೆಯ ನಿಮಿತ್ತ 16 ಜೋಡಿಗಳ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತವೃಂದಕ್ಕೆ ವಿವಿಧ ತರಹದ ಖಾದ್ಯಗಳನ್ನು ಮಾಡಲಾಗಿತ್ತು. ಬುಂದಿ, ಜಿಲೇಬಿ,ಸೋಮಪಾಪಡೆ, ರೊಟ್ಟಿ, ಚಪಾತಿ,ಮೊಸರು, ಹೆಸರುಕಾಳು, ಬೇಳೆ, ನುಗ್ಗೆಕಾಯಿ, ಬದನೆಕಾಯಿ ಪಲ್ಯ, ಅನ್ನ-ಸಾಂಬಾರು, ಬಾಳೆಹಣ್ಣು ಭಕ್ತರಿಗೆ ನೀಡಲಾಯಿತು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸರ್ಮಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net