

ಯಲಬುರ್ಗಾ: ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಅಭ್ಯುದಯಕ್ಕೆ ಮುಂದಾಗಬೇಕು ಎಂದು ತಾಳಿಕೋಟೆಯ ಶ್ರೀ ಮಹಾಂತದೇವರು ಹೇಳಿದರು.
ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಗುರುವಾರ ದುಶ್ಚಟಗಳ ಜೋಳಿಗೆ ಅಭಿಯಾನದಲ್ಲಿ ಮಾತನಾಡಿದರು. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಗ್ರಾಮದಲ್ಲಿ ಪ್ರವಚನ ಹಮ್ಮಿಕೊಂಡಿದ್ದು, ಅಭಿಯಾನ ಮೂಲಕ ಗ್ರಾಮವನ್ನು ದುಶ್ಚಟಮುಕ್ತವಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ನಾನು ಭಿಕ್ಷೆಗೆ ಬಂದಿದ್ದೇನೆ. ನಿಮ್ಮಲ್ಲಿರುವ ದುಶ್ಚಟಗಳನ್ನು ಜೋಳಿಗೆಗೆ ಹಾಕಿ. ದುಶ್ಚಟದಿಂದ ಮಾನವ ಜನ್ಮ ದುರ್ಲಭವಾಗಿದೆ. ಬದುಕು ಸಾರ್ಥಕತೆಯಿಂದ ತುಂಬಿರಬೇಕು. ವ್ಯಸನಮುಕ್ತರಾಗಿ ಬಾಳಿದರೆ ಬದುಕು ಸಾರ್ಥಕವಾಗುತ್ತೆ. ಬಂಗಾರ, ಹಣ, ಉನ್ನತ ಕಟ್ಟಡಗಳು, ಐಷಾರಾಮಿ ಬದುಕು ದೇಶದ ಆಸ್ತಿಯಲ್ಲ. ಯುವಶಕ್ತಿ ದೇಶದ ಸಂಪತ್ತು. ಇದನ್ನರಿತು ಸ್ವಚ್ಛ ಭಾರತದ ಜತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ದುಶ್ಚಟಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಮೊದಲು ನೀವು ಉತ್ತಮ ಗುಣಗಳನ್ನು ಬೆಳೆಸಿಕೊಂಡು ಇತರರಿಗೆ ಮಾರ್ಗದರ್ಶಕರಾಗಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯುವಕ ಹಾಗೂ ಯುವತಿಯರು ಜಾನಪದ ಕಲೆಗಳಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಮನಸ್ಸಿಗೆ ಉತ್ಸಾಹ ಸಿಗುಗತ್ತದೆ. ಇದರಿಂದ ದುಶ್ಚಟಗಳ ಕಡೆ ಮನಸ್ಸು ಸುಳಿಯುವುದಿಲ್ಲ ಎಂದು ಹೇಳಿದರು.
ಗ್ರಾಮದ ಮುಖಂಡ ಶ್ರೀನಿವಾಸ ಮಾತನಾಡಿ, ಅವಿಭಕ್ತ ಕುಟುಂಬದಲ್ಲಿ ದುಶ್ಚಟಗಳಿಗೆ ದಾಸರಾಗುವವರು ವಿರಳ. ವಿಘಟನೆಯಾದ ಕುಟುಂಬಗಳಲ್ಲಿ ಈ ವ್ಯಸನ ಹೆಚ್ಚು ಎಂದು ಹೇಳಿದರು.
ಪ್ರಮುಖರಾದ ಬಸವರಾಜ ಕಳಸಪ್ಪನವರ, ರಮೇಶ ಮಳಗೌಡ್ರ, ವೀರನಗೌಡ ಗೋಣಿ, ಶರಣಪ್ಪ ಬೂಸಣ್ಣನವರ, ಮಲ್ಲೇಶಪ್ಪ ಬಂಡ್ರಿ, ವಿರೂಪಾಕ್ಷಪ್ಪ ಗೋಣಿ, ಕೆರಿಬಸಪ್ಪ ತಳವಾರ, ಫಕೀರಪ್ಪ ದಿಂಡೂರು, ಕರಿಬಸಪ್ಪ ಪಟ್ಟೇದ, ಕಳಕನಗೌಡ ಪೊಲೀಸ್ ಪಾಟೀಲ್ ಶಂಕರ ದಿಂಡೂರು, ಭೀಮನಗೌಡ ಹುಲಿಗಿ, ಕಳಕೇಶ ಶ್ರೀಗಿರಿ, ದೇವಪ್ಪ ಕರಿಗಾರ ಇತರರಿದ್ದರು.