ಜನಮಾನಸದಲ್ಲಿ ಶಾಶ್ವತ ನೆಲೆಯೂರಿದ ಖಾಜಾಸಾಬ

Yelburga khajasab drama
ಹುಚ್ಚಿರೇಶ್ವರ ಪಾತ್ರದಲ್ಲಿ ಖಾಜಾಸಾಬ ಕಲ್ಲೂರ ಮನೋಜ್ಞವಾಗಿ ನಟಿಸಿರುವುದು.
Published on

ಯಲಬುರ್ಗಾ: ಕಲೆ ನೈಪುಣ್ಯತೆಯಿಂದ ಹೆಸರುವಾಸಿಯಾಗಿದ್ದ ಕಲಾವಿದ ಖಾಜಾಸಾಬ ಕಲ್ಲೂರ (62) ಸೆ.27 ರಂದು ಇಹಲೋಕ ತ್ಯೆಜಿಸಿದ್ದು, ಅ.6 ರಂದು ತಾಲೂಕಿನ ಕರಮುಡಿ ಗ್ರಾಮದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕರಮುಡಿ ಶ್ರೀ ಕರವೀರಭದ್ರರೇಶ್ವರ ದೇವಸ್ಥಾನ ಆವರಣದಲ್ಲಿ ಕರವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಹಾಗೂ ಗ್ರಾಮಸ್ಥರಿಂದ ಬೆಳಗ್ಗೆ 11ಕ್ಕೆ ಕಾರ್ಯಕ್ರಮ ನಡೆಯಲಿದೆ. ತಾಲೂಕಿನ ಹರಗುರು ಚರಮೂರ್ತಿಗಳು, ರಾಜಕಾರಣಿಗಳು, ಕಲಾವಿದರು, ಸಾಹಿತಿಗಳು ಭಾಗವಹಿಸುವರು.

ಕರಮುಡಿಯಲ್ಲಿ ಹುಚ್ಚುಸಾಬ ಹಾಗೂ ಫಕೀರಬೀ ಅವರ ಎರಡನೇ ಮಗನಾಗಿ ಖಾಜಾಸಾಬ ಕಲ್ಲೂರ ಜನಿಸಿದರು. ಶಾಲೆ ಮೆಟ್ಟಿಲು ಹತ್ತದ ಇವರನ್ನು ಕಲಾದೇವಿ ಕೈಬೀಸಿ ಕರೆದಿದ್ದರಿಂದ ನಾಟಕಗಳಲ್ಲಿ ಅಭಿನಯಿಸಲು ಸಾಧ್ಯವಾಯಿತು. ಇವರು ಅಭಿನಯಿಸಿದ ನಾಟಕಗಳು ಉತ್ತರ ಕರ್ನಾಟಕದ ಬಹುತೇಕ ಹಳ್ಳಿ, ಪಟ್ಟಣ ಪ್ರದೇಶಗಳಲ್ಲಿ ಹೆಸರುವಾಸಿಯಾಗಿವೆ. ಶ್ರೀ ಕರವೀರಭದ್ರೆಶ್ವರ ಸೇವಾ ನಾಟ್ಯ ಸಂಘದ ಮುಖಾಂತರ 1996 ರಿಂದ ನಿರಂತರ 30 ವರ್ಷದವರೆಗೆ ಕರಮುಡಿ ಗ್ರಾಮವನ್ನೊಳಗೊಂಡಂತೆ ಯಲಬುರ್ಗಾ, ಕುಕನೂರು ತಾಲೂಕಿನ ಹಲವಾರು ಗ್ರಾಮ-ಪಟ್ಟಣದಲ್ಲಿ 90 ಬಾರಿ ‘ಕೊಡೇಕೊಪ್ಪ ಹುಚ್ಚೀರೇಶ್ವರ ಮಹಾತ್ಮ’ ನಾಟಕ ಪ್ರದರ್ಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಟನೆ ನೋಡಿ ಹರಗುರು ಮಠಾಧೀಶರು, ಖಾಜಾಸಾಬ ಒಬ್ಬ ವ್ಯಕ್ತಿಯಲ್ಲ ಅದೊಂದು ದಿವ್ಯಶಕ್ತಿ. ಇತ ನಿಜಕ್ಕೂ ಹುಚ್ಚೀರಜ್ಜನ ಅವತಾರ ಪುರುಷ ಎಂದು ಬಣ್ಣಿಸಿದ್ದುಂಟು.

ಭಕ್ತಿಭಾವದಿಂದ ಇಡೀ ದೇಹವನ್ನೆ ಕಣ್ಣಾಗಿಸಿಕೊಂಡು ಆಸ್ವಾಧಿಸುವ ಪ್ರೇಕ್ಷಕ ವರ್ಗವನ್ನು ಈ ನಾಟಕ ಸೃಷ್ಟಿಸಿತ್ತು. ಹುಚ್ಚೀರಪ್ಪಜ್ಜ ನಾಯಿಯ ಜೊತೆ ಸಹಭೋಜನ ಮಾಡುವುದು ಹಾಗೂ ಹಾವಿನೊಡನೆ ಸರಸವಾಡುವ ಪವಾಡಗಳು ಆಕರ್ಷಕವಾಗಿ ಕಾಣಿಸುತ್ತಿದ್ದವು.

ಖಾಜಾಸಾಬರು ಒಬ್ಬ ಶ್ರೇಷ್ಠ ಹಾರ್ಮೋನಿಯಂ ವಾದಕರಾಗಿದ್ದರು. ಅವರು ಹಾಡುತ್ತಿದ್ದರೇ ಜನ ನಿಂತು ಕೇಳುತ್ತಿದ್ದರು. ಸತಿ ಸಂಸಾರದ ಜ್ಯೋತಿ, ಹಳ್ಳಿಹುಲಿ ಕೊಟ್ಟ ಬೆಳ್ಳಿ ಕಾಲುಂಗರ ನಾಟಕಕ್ಕೆ ಸಂಗೀತ ನಿರ್ದೇಶಕರಾಗಿ ಸಂಗೀತ ಕ್ಷೇತ್ರಕ್ಕೂ ದಾಪುಗಾಲು ಇಟ್ಟಿದ್ದರು.

1982ರಲ್ಲಿ ಮಾರುತೇಶ ಮಾಂಡ್ರೆ ಅವರು ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ಪುರಾಣ ಹೇಳಲು ಬಂದಾಗ ಗ್ರಾಮದ ಹಿರಿಯರು ಹಾಗೂ ಹುಚ್ಚೀರಪ್ಪಜ್ಜನ ಪರಮಭಕ್ತರಾದ ಬಸಪ್ಪ ಬಲಕುಂದಿ ಅವರು ಆಸಕ್ತಿ ವಹಿಸಿ 1015 ರೂ. ಮಾಂಡ್ರೆಗೆ ನೀಡಿ ನಾಟಕವನ್ನು ಬರೆಸಿದ್ದಾರೆ. ಇವತ್ತಿಗೂ ನಾಟಕ ಮುದ್ರಣಗೊಂಡಿಲ್ಲ. ಮುಂದಿನ ಪೀಳಿಗೆಗೆ ಅವರ ಇತಿಹಾಸ ತಿಳಿಯ ಬೇಕಾಗಿರುವುದರಿಂದ ಕರಮುಡಿಯ ಕರವೀರಭದ್ರೆಶ್ವರ ಹಾಗೂ ಹುಚ್ಚೀರೇಶ್ವರ ಟ್ರಸ್ಟ್ ಕಮಿಟಿಯವರು ನಾಟಕವನ್ನು ಮುದ್ರಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ಭಾವ ಹಲವರದ್ದಾಗಿದೆ. ಖಾಜಾಸಾಬ ಅವರು ಗ್ರಾಪಂ ಸದಸ್ಯರಾದಾಗ ಅತಿ ಹೆಚ್ಚು ಮತಗಳನ್ನು ಪಡೆದು ಜಯಗಳಿಸಿದ್ದರು. ಇದು ಸರ್ವಧರ್ಮಗಳ ಪ್ರೇಮಿಯಾಗಿ ಸಮನ್ವಯತೆಗೆ ಸಾಕ್ಷಿಕರಿಸಿತ್ತು.

ಕದಲದ ಶ್ವಾನ

ಕಲಾವಿದ ಖಾಜಾಸಾಬ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಕರವೀರಭದ್ರೇಶ್ವರ ಟ್ರಸ್ಟ ಕಮಿಟಿ ಅವಕಾಶ ಕಲ್ಪಿಸಿತ್ತು. ನಾಟಕದಲ್ಲಿ ಅಭಿನಯಿಸಿದ್ದ ನಾಯಿಯೂ ಸಪ್ಪೆಮುಖದ್ದಲ್ಲಿದ್ದು ಅಂತ್ಯಕ್ರಿಯೆ ಆಗುವವರೆಗೂ ಜಾಗ ಬಿಟ್ಟು ಅಗಲಿಲ್ಲ. ಶ್ವಾನದ ಮಾನವೀಯ ಪ್ರೀತಿಗೆ ಎಲ್ಲರೂ ಬೆರಗಾದರು.

ಸಾರ್ಥಕ ಜೀವನ ಸಾಗಿಸಿದ ಖಾಜಾಸಾಬ ಎಲ್ಲರ ಮನದಲ್ಲಿ ಸದಾ ಉಳಿಯುವಂತ ವ್ಯಕ್ತಿತ್ವ. ನುಡಿ ನಮನ ಸಲ್ಲಿಸುವಾಗ ಗುಡಿಯಲ್ಲಿ ನೆಲೆಸಿರಬಹುದೆ ಎಂದು ಎಲ್ಲರ ಮನದಲ್ಲಿ ಮೂಡುತ್ತಿದೆ. ಖಾಜಾಸಾಬ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. | ವೀರಪ್ಪ ಮಲ್ಲಪ್ಪ ನಿಂಗೋಜಿ ಮಾಜಿ ಅಧ್ಯಕ್ಷ, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net