ಮಹಾರಾಷ್ಟ್ರದ ಸರ್ಕಾರದ ವಿರೋಧ ಸರಿಯಲ್ಲ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ

BASAVARAJA-RAYARADDY.
BASAVARAJA-RAYARADDY.
Published on

ಯಲಬುರ್ಗಾ: ಆಲಮಟ್ಟಿ ಜಲಾಶಯ ಅಣೆಕಟ್ಟು ಎತ್ತರಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಮಹಾರಾಷ್ಟ್ರ ಸರ್ಕಾರ ಅನಗತ್ಯ ವಿರೋಧ ಮಾಡುವುದು ಅಂತಾರಾಜ್ಯ ಬಾಂಧವ್ಯಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಈವರೆಗೂ ಸುಮ್ಮನಿದ್ದ ಮಹಾರಾಷ್ಟ್ರ ಸರ್ಕಾರ ಏಕಾಏಕಿ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅರ್ಥಹೀನ ಪ್ರಯತ್ನ ಎಂದು ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ವಿಜಯವಾಣಿಯೊಂದಿಗೆ ಮಂಗಳವಾರ ಮಾತನಾಡಿದ ಅವರು, ಮೇ 9 ರಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಆಲಮಟ್ಟಿ ಅಣೆಕಟ್ಟು ಎತ್ತರವನ್ನು 519 ಮೀಟರ್‌ನಿಂದ 524.63 ಮೀಟರ್‌ಗೆ ಹೆಚ್ಚಿಸುವುದರಿಂದ ಮಹಾರಾಷ್ಟ್ರದಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತದೆ. ಸಾಂಗ್ಲಿ, ಕೊಲ್ಲಾಪುರಕ್ಕೆ ತೊಂದರೆಯಾಗುತ್ತದೆ.

ಈ ಪ್ರಕ್ರಿಯೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇದು ರಾಜ್ಯ ರೈತರ ಹಿತಕ್ಕೆ ಮಾರಕವಾಗಲಿದೆ. ಈ ಯೋಜನೆಯನ್ನು ವಿಳಂಬ ಮಾಡುವುದರಿಂದ ಯೋಜನೆ ವೆಚ್ಚವೂ ಏರಿಕೆಯಾಗುತ್ತ್ತಿದೆ. ಭೂಸ್ವಾಧೀನಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ತ್ವರಿತಗತಿ ಅನುಷ್ಠಾನ ಮುಖ್ಯ ಎಂದರು.

ಕೃಷ್ಣ ನ್ಯಾಯಾಧೀಕರಣದ ತೀರ್ಪಿನಲ್ಲಿ ಆಲಮಟ್ಟಿ ಜಲಾಶಯ ಎತ್ತರಕ್ಕೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ತನ್ನ ಪಾಲಿನ ನೀರನ್ನು ಬಳಕೆ ಮಾಡಲು ಮಹಾರಾಷ್ಟ್ರದಿಂದ ಇದುವರೆಗೂ ಆಕ್ಷೇಪಣೆಗಳು ಇರಲಿಲ್ಲ. 2010 ಹಾಗೂ 2013 ರಲ್ಲಿನ ತೀರ್ಪುಗಳಿಗೂ ಮಹಾರಾಷ್ಟ್ರ ತಗಾದೆ ತೆಗೆದಿರಲಿಲ್ಲ. ನ್ಯಾಯಾಧೀಕರಣದ ತೀರ್ಪನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ನ್ಯಾಯಾಲಯಕ್ಕೆ ಮಹಾರಾಷ್ಟ್ರ ಸರ್ಕಾರವೇ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆದರೀಗ ಇದ್ದಕ್ಕಿದ್ದಂತೆ ಆಲಮಟ್ಟಿ ಎತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಯೋಜನೆಯ ದಿಕ್ಕು ತಪ್ಪಿಸುವ ಹಾದಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net