

ಕಲಬುರಗಿ: ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬೆದರಿಸಿ, ಎಳೆದಾಡಿ, ಕಾರ್‌ನಲ್ಲಿ ಕೂಡಿ ಹಾಕಿ ಒಂದು ಲಕ್ಷ ರೂ. ರಾಬರಿ ಮಾಡಿಕೊಂಡು ಹೋಗಿದ್ದು, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಸೇರಿ ೭ ಜನರ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಖುಬಾ ಪ್ಲಾಟ್ ನಿವಾಸಿ ಕರಬಸಪ್ಪ ದೇಶಮುಖ ಅವರ ದೂರಿನ ಆಧಾರದಲ್ಲಿ ಜ್ಯೋತಿ ತುಮಕೂರ, ಹಣಮಂತ ಯಳಸಂಗಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಶ್ರೀಕಾಂತ ರೆಡ್ಡಿ, ಅರವಿಂದ ಕಮಲಾಪುರ, ರಾಜು ಲೇಂಗಟಿ, ಸಂತೋಷ ಪಾಳಾ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ: ಬೆಂಗಳೂರಿನಲ್ಲಿ ರಿಯಲ್ ಎಸ್ಟೆಟ್ ಉದ್ಯಮ ಮಾಡುವ ಕರಬಸಪ್ಪ ದೇಶಮುಖ ಅವರು ತುಮಕೂರಿನ ಜ್ಯೋತಿ ಅವರ ಬಳಿ ೧.೨೦ ಕೋಟಿ ರೂ. ಪಡೆದಿದ್ದು, ಅದರ ಲಾಭವನ್ನು ವಾಪಸ್ ನೀಡಿದ್ದು, ಹೆಚ್ಚಿನ ಹಣ ಬರುತ್ತದೆ ಎಂದು ಜ್ಯೋತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ನಲ್ಲಿ ಪ್ರಕರಣವಿದ್ದು, ತೀರ್ಪು ಅವರ ಪರ ಬಂದರೆ ಹೆಚ್ಚಿನ ಹಣ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಜ್ಯೋತಿ ಅವರು ಹಣಮಂತ ಯಳಸಂಗಿಗೆ ವಿಷಯ ತಿಳಿಸಿದ್ದಾರೆ. ಆತ ಗುಂಪು ಕಟ್ಟಿಕೊಂಡು ಬಂದ ಕಲಬುರಗಿ ನಗರದಲ್ಲಿನ ಖೂಬಾ ಪ್ಲಾಟ್‌ನಲ್ಲಿರುವ ಕರಬಸಪ್ಪ ಕಚೇರಿಗೆ ಬಂದು, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮಹಿಳೆಯ ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ.
ಕೋರ್ಟ್ ತೀರ್ಪಿನಂತೆ ಹಣ ನೀಡುತ್ತೇನೆ ಎಂದರೂ ಬಿಡದೆ `ಕಲಬುರಗಿಯ ಎಲ್ಲ ರಿಯಲ್ ಎಸ್ಟೇಟ್ ದಂಧೆ ಮಾಡುವವರು ಸೇನೆ ಕಾಲು ಕೆಳಗೆ ಇದ್ದಾರೆ. ನಾವು ಹೇಳಿದಂತೆ ಕೇಳಬೇಕು. ಅವಳು ಕೇಳುವ ಹಣ ಕೊಡು. ಇಲ್ಲದಿದ್ದರೆ ಚಾಕು ಹಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಕಲಂ ೧೮೯ (೨), ೧೯೧(೨), ೧೨೭(೨), ೩೫೧(೨), ೩೦೯(೪) ಕಲಂ ಅಡಿ ಪ್ರಕರಣ ದಾಖಲಾಗಿದೆ.
ಗನ್ ಇಟ್ಟು, ಲಕ್ಷ ರೂ.ದೋಚಿದ್ರು: ಖೂಬಾ ಪ್ಲಾಟ್‌ನಲ್ಲಿನ ಕರಬಸಪ್ಪ ದೇಶಮುಖ ಅವರ ಕಚೇರಿ ಮೇಲೆ ದಾಳಿ ನಡೆಸಿದ ದಲಿತ ಸೇನೆಯ ಹಣಮಂತ ಯಳಸಂಗಿ ಮತ್ತು ಸಂಗಡಿಗರು ಕರಬಸಪ್ಪರನ್ನು ಕಾರ್‌ನಲ್ಲಿ ಕೂಡಿಹಾಕಿ, ಅಂಗಿ ಶರ್ಟ್ನ್ನು ಎಳೆದಾಡಿದ್ದು, ಅರವಿಂದ ಕಮಲಾಪುರ ಎಂಬಾತ ಪಿಸ್ತೂಲ್ ತಲೆಗೆ ಇಟ್ಟು ಶೂಟ್ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದು, ಒಂದು ಲಕ್ಷ ರೂ. ಜಬರದಸ್ತಿಯಿಂದ ಕಸಿದುಕೊಂಡಿದ್ದಾರೆ. ಏಕೆ ಎಂದು ಪ್ರಶ್ನಿಸಿದರೆ ಇಲ್ಲಿವರೆಗೆ ಬಂದಿದ್ದಕ್ಕೆ ಎಂದು ಹೇಳಿದ್ದಾರೆ. ಅವಳಿಗೆ ಹಣ ಕೊಡದಿದ್ದರೆ ಮತ್ತೆ ಬರುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಕರಬಸಪ್ಪ ದೂರು ನೀಡಿದ್ದಾರೆ.