ನೇಗಿಲ ಹಿಡಿದ ‘ಸಂತ’

Published on

ಯಳಂದೂರು: ಕೃಷಿ ಎನ್ನುವುದು ಖುಷಿ ತರುವ ಉದ್ಯೋಗ. ನಿತ್ಯ ಜಮೀನಿನಲ್ಲಿ ಶ್ರಮ ವಹಿಸಿ ಕೆಲಸ ಮಾಡುವವರಿಗೆ ಒಂದಿಲ್ಲೊಂದು ರೀತಿಯಲ್ಲಿ ಲಾಭ ಕಟ್ಟಿಟ್ಟ ಬುತ್ತಿ. ತಮ್ಮ ಜಮೀನಿಲ್ಲಿ ದಿನ ನಿತ್ಯ ಕಾಯಕಯೋಗಿ ರೀತಿಯಲ್ಲಿ ಸತತ ಕೆಲಸವನ್ನು ಮಾಡುವ ಮೂಲಕ ಖಾವಿಧಾರಿ ಸ್ವಾಮೀಜಿ ಬರೀ ಧಾರ್ಮಿಕ ಕಾರ್ಯಕ್ಕೆ ಸಿಮೀತಗೊಳ್ಳದೆ, ಕಾಯಕವೇ ಕೈಲಾಸ ಎಂಬಂತೆ ಕೃಷಿ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಪಟ್ಟಣದ ಸುವರ್ಣಾವತಿ ನದಿಯ ಸಮೀಪದಲ್ಲಿರುವ ಕಾರಪುರ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀ ಬಸವರಾಜ ಸ್ವಾಮೀಜಿ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಹೊನ್ನಿನ ಹೊಳೆ ಎಂದೇ ಖ್ಯಾತಿಯ ಸುವರ್ಣಾವತಿ ನದಿಯ ಪಕ್ಕದಲ್ಲಿ ಹೊನ್ನು ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇವರ ಜಮೀನಿನ ಒಳಗೆ ಒಂದು ಸುಂದರ ತೋಟವನ್ನು ಮಾಡಿಕೊಂಡು, ತೋಟಗಾರಿಕೆ ಬೆಳೆಗಳಾದ ಮಾವು, ಮೂಸಂಬಿ, ಸಪೋಟ ಸೇರಿದಂತೆ ವಿವಿಧ ಬೆಳೆಗಳನ್ನು ಒಟ್ಟು 25 ಎಕರೆಯಷ್ಟು ಕೃಷಿ ಜಮೀನಿನಲ್ಲಿ ಬೆಳೆದಿದ್ದಾರೆ. ಈ ಪೈಕಿ 12 ಎಕರೆಯಲ್ಲಿ ತೆಂಗು ಬೆಳೆಯಲಾಗಿದೆ. ಇದರಲ್ಲಿ ಫಲ ಕೊಡುವ 900 ಮರಗಳು ಇವೆ. ಇದರೊಂದಿಗೆ ಸ್ವಾಭಾವಿಕವಾಗಿ ಬೆಳೆದಿರುವ ಕಾಡು ಗಿಡಗಳೂ ಇವರ ತೋಟದಲ್ಲಿದೆ. ಇನ್ನುಳಿದ 8 ಎಕರೆಯಲ್ಲಿ 500 ಬಾಳೆ 2 ಎಕರೆಯಲ್ಲಿ ಅಡಕೆ ಇನ್ನೆರಡು ಎಕರೆಗಳಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತಿದೆ.

30 ವರ್ಷಗಳಿಂದ ಕಾಯಕ: 73ನೇ ವಯಸ್ಸಿನಲ್ಲೂ ಪ್ರತಿನಿತ್ಯ ಮುಂಜಾನೆ ಧಾರ್ಮಿಕ ವಿಧಿವಿಧಾನ ಮತ್ತು ಪೂಜಾ ಕೈಂಕರ್ಯಗಳನ್ನು ಮುಗಿಸಿದ ನಂತರ ಪತ್ರಿಕೆ ಓದಿ, ಶಾಲಾ ಮಕ್ಕಳ ಕಡೆ ಗಮನಹರಿಸಿ, ನಂತರ ಕೃಷಿಭೂಮಿಗೆ ತೆರಳಿ ಸ್ವತಃ ತಾವೇ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ, ಕಳೆ ಕಿತ್ತು, ಕೂಲಿಯಾಳುಗಳೊಂದಿಗೆ ದುಡಿಯುವ ಬಸವಣ್ಣನವರ ಕಾಯಕ ತತ್ವವನ್ನು ಪಾಲಿಸುವುದು ಇವರ ನಿತ್ಯದ ಕೆಲಸ.

ಸಾವಯವ ಕೃಷಿಗೆ ಒತ್ತು: ಅನಾದಿ ಕಾಲದಿಂದಲೂ ಇಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಗಿದೆ. ಇವರ ಜಮೀನಿನಲ್ಲಿ ಕೆರೆಮಣ್ಣು, ಕೊಟ್ಟಿಗೆ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಅನುಸರಿಸಿಕೊಂಡು ಬರಲಾಗುತ್ತಿದೆ. ಅಪರೂಪದ ಬೀಜರಹಿತ ನಿಂಬೆ ಹಣ್ಣಿನ ಗಿಡಗಳೂ ಸೇರಿದಂತೆ ವಿವಿಧ ಜಾತಿಯ ಔಷಧೀಯ ಸಸ್ಯಗಳ ಭಂಡಾರವನ್ನೂ ಇಲ್ಲಿ ಕಾಣಬಹುದು. ಈ ಭಾಗದಲ್ಲಿ ಅಪರೂಪ ಎಂಬಂತೆ ಏಲಕ್ಕಿ ಗಿಡಗಳನ್ನು ಬೆಳೆದಿರುವ ಸ್ವಾಮಿಜಿ, ಲವಂಗವನ್ನು ಬೆಳೆಯಲೂ ಆಸಕ್ತಿ ಇರುವುದಾಗಿ ತಮ್ಮ ಕೃಷಿಯ ಮೇಲಿನ ಪ್ರೀತಿಯನ್ನು ತೋಡಿಕೊಂಡಿದ್ದಾರೆ.

ಕಾಳು, ತರಕಾರಿಗೂ ಅದ್ಯತೆ:

ತೋಟದಲ್ಲಿ ಫಲವತ್ತತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ತೊಗರಿ, ಹಲಸಂದೆ, ಟೊಮ್ಯಾಟೋ, ಸೊಪ್ಪು, ಬದನೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯಾಗುತ್ತಿದೆ. ಜತೆಗೆ ಜೇನು ಕೃಷಿಯನ್ನು ಸಹ ಇವರು ಮಾಡುತ್ತಿದ್ದು, ಇದರಿಂದ ಪರಾಗಸ್ಪರ್ಶ ಹೆಚ್ಚಾಗಿ ಇಳುವರಿ ಏರಿಕೆ ಮಾಡುವ ಉದ್ದೇಶ ಇವರಿಗಿದೆ. ಇಲ್ಲಿ ಬೆಳೆದ ದವಸಧಾನ್ಯ, ಹಣ್ಣು, ತರಕಾರಿಗಳನ್ನು ಮಠದ ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸಿಕೊಂಡು ಉಳಿದ ಒಂದಷ್ಟನ್ನು ಮಾರಾಟ ಮಾಡಲಾಗುತ್ತಿದೆ. ಮಠದಲ್ಲಿ ನಿರಂಜನ ಪ್ರತಿಷ್ಠಾನದ ವತಿಯಿಂದ ವಿದ್ಯಾಸಂಸ್ಥೆಯನ್ನು ತೆರೆದು ಸುತ್ತಮುತ್ತಲಿನ ಬಡ ವರ್ಗದ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಿರುವುದು ಈ ಮಠದ ಸ್ವಾಮೀಜಿ ಸಮಾಜಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ.

ಜಮೀನಿನಲ್ಲಿ ದಿನನಿತ್ಯ ಕೆಲಸಗಾರರ ಜತೆಗೆ ನಾವು ದುಡಿಮೆ ಮಾಡಿದರೆ ಮಾತ್ರ ಯಶಸ್ಸು ಸಾಧಿಸಬಹುದು. ಸಾವಿರಾರು ವರ್ಷಗಳ ಹಿಂದಿನ ಬೇಸಾಯ ಪದ್ಧತಿಯಂತೆಯೇ ನಾನು ಕೃಷಿ ಕಾಯಕವನ್ನು ಮಾಡುತ್ತಿದ್ದೇನೆ. ಇದು ನನಗೆ ಖುಷಿ ಕೊಡುವು ಕೆಲಸವಾಗಿದೆ. ಭಾರತ ದೇಶದಲ್ಲಿ ಕೃಷಿಯನ್ನು ನಂಬಿಕೊಂಡು ಶೇ.60 ರಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ. ಸಮಯ ಬದಲಾದಂತೆ ಕೃಷಿಯಲ್ಲಿ ಕೊಂಚ ಮಾರ್ಪಾಡುಗಳನ್ನು ತಂದುಕೊಂಡು ಸಮಗ್ರ ಕೃಷಿ ಮಾಡಿದ್ದೇ ಆದಲ್ಲಿ ಇದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
ಶ್ರೀಬಸವರಾಜ ಸ್ವಾಮೀಜಿ ಕಾರಪುರ ವಿರಕ್ತ ಮಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net