

ನಂದಗುಡಿ: ಮಾರ್ಚ್ ತಿಂಗಳು ಹತ್ತಿರವಾಗುತ್ತಿದ್ದಂತೆ ಬಿಸಿಲ ತಾಪ ಹೆಚ್ಚತೊಡಗಿದೆ. ಹೊರಗೆ ಹೊರಟ ಜನ ದಣಿವಾರಿಸಿಕೊಳ್ಳಲು ಎಳನೀರಿನ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ತರಹೇವಾರಿ ಪಾನೀಯಗಳಿಗಿಂತ ಎಳನೀರಿಗೆ ಬೇಡಿಕೆ ಹೆಚ್ಚಿದೆ.
ನಂದಗುಡಿಯ ರಸ್ತೆ ಬದಿಯ ಎಲ್ಲೆಂದರಲ್ಲಿ ಎಳನೀರು ವ್ಯಾಪಾರಿಗಳದ್ದೇ ಕಾರುಬಾರು. ಮಧ್ಯಾಹ್ನದ ವೇಳೆ ಎಳನೀರು ಅಂಗಡಿಗಳ ಮುಂದೆ ಜನ ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ. ಗಾತ್ರ ಹಾಗೂ ಎಳನೀರಿನಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂಬ ಆಧಾರದ ಮೇಲೆ ಬೆಲೆ ನಿರ್ಧರಿತವಾಗುತ್ತದೆ. ಆದರೆ ಬೇಸಿಗೆಯಲ್ಲಿ ಎಲ್ಲ ಕಡೆಗಳಲ್ಲೂ ಎಳನೀರಿನ ದರ ಹೆಚ್ಚುತ್ತಿದೆ. ಸಾಮಾನ್ಯ ದಿನಗಳಲ್ಲಿ 20ರಿಂದ 25 ರೂಪಾಯಿಗೆ ಸಿಗುತ್ತಿದ್ದ ಎಳನೀರು ಇದೀಗ 35 ರೂಪಾಯಿವರೆಗೆ ದರ ಹೆಚ್ಚಿಸಿಕೊಂಡಿದೆ.
ಔಷಧ ಆಗರ: ಎಳನೀರು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಅಂಗಾಂಗಗಳಲ್ಲಿ ಟಾಕ್ಸಿನ್ ದೂರವಾಗಿ ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ನಿಯಮಿತವಾಗಿ ಎಳನೀರು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮಾನವನ ದೇಹಕ್ಕೆ ಬಹುಮುಖ್ಯವಾದ ಲವಣಾಂಶ ಒಳಗೊಂಡ ಸಮೃದ್ಧ ಪೇಯವೆಂದೇ ಹೆಸರಾಗಿರುವುದರಿಂದ ಎಳನೀರಿಗೆ ಜನ ಮುಗಿಬಿದ್ದಿರುವುದು ಕಂಡುಬರುತ್ತಿದೆ. ಸರಿಯಾದ ಮಳೆಯಿಲ್ಲದೆ ತೋಟಗಳಲ್ಲಿ ಎಳನೀರಿನ ಇಳುವರಿ ಕುಸಿತವಾಗಿ ದರ ಹೆಚ್ಚಳವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಹೋಬಳಿಯ ಹಲವು ಗ್ರಾಮಗಳ ರೈತರಿಂದ ಎಳನೀರು ಖರೀದಿಸಬೇಕು. ಕೂಲಿ ಆಳುಗಳಿಂದ ಮರದಿಂದ ಇಳಿಸಬೇಕು. ಕಾಯಿಗೆ ಬೇಡಿಕೆ ಇರುವುದರಿಂದ ಎಳನೀರು ಲಭ್ಯತೆ ಕಷ್ಟ. ಆಂಜಿನಪ್ಪ, ಎಳನೀರು ವ್ಯಾಪಾರಿ, ಚೊಕ್ಕಸಂದ್ರ ಈ ಬಾರಿ ಸಕಾಲಕ್ಕೆ ಮಳೆಯಿಲ್ಲದೆ ಅಂತರ್ಜಲ ಕುಸಿದಿದ್ದು ತೋಟಗಳಲ್ಲಿರುವ ತೆಂಗಿನ ಮರಗಳಲ್ಲಿ ಇಳುವರಿ ಕಡಿಮೆಯಾಗಿದೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದರೂ ಮಧ್ಯವರ್ತಿಗಳು ರೈತರಿಂದ ಕಡಿಮೆ ದರಕ್ಕೆ ಎಳನೀರು ಖರೀದಿ ಮಾಡುತ್ತಾರೆ. ರೈತರಿಗೆ ಕಡಿಮೆ ಲಾಭಾಂಶ ಸಿಗುತ್ತದೆ. ಗೋಪಾಲ್, ಎಳನೀರು ಬೆಳೆಗಾರ, ಬಾವಾಪುರ