ಅಂಗನವಾಡಿ ಸುತ್ತಲೂ ಚರಂಡಿ ನೀರು ಸಂಗ್ರಹ

Oplus_131072
Oplus_131072
Published on

ಯಳಂದೂರು : ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಅಂಗನವಾಡಿ ಕೇಂದ್ರ -1ರ ಸುತ್ತಮುತ್ತ ಕೊಳಚೆ ನೀರು ಸಂಗ್ರಹಗೊಂಡು ಅಶುಚಿತ್ವ ತಾಂಡವವಾಡುತ್ತಿದೆ.

ಗ್ರಾಮದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು, ಅಂಗನವಾಡಿ ಕೇಂದ್ರದ ಸುತ್ತ ನೀರು ಸಂಗ್ರಹವಾಗಿ ಸಮಸ್ಯೆ ಉಂಟಾಗುತ್ತದೆ. ಅಂಗನವಾಡಿಗೆ ಬರುವ ಮಕ್ಕಳು, ಗರ್ಭಿಣಿಯರು ದುರ್ವಾಸನೆ ನಡುವೆ ಬರಬೇಕಾದ ಸನ್ನಿವೇಶ ಏರ್ಪಟ್ಟಿದೆ.
ಬಾಣಂತಿಯರು, ಗರ್ಭಿಣಿಯರು, ಪುಟ್ಟಮಕ್ಕಳೇ ಹೆಚ್ಚಾಗಿ ಇಲ್ಲಿ ಓಡಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಮನೆಮಾಡಿದೆ.

ಸುತ್ತಮುತ್ತಲಿನ ಮನೆಯವರು ಕೂಡ ಇದರ ಪರಿಣಾಮ ಎದುರಿಸುವಂತಾಗಿದೆ. ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕೂಡ ಕಾಡುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂಬ ಒತ್ತಾಯ ಸ್ಥಳೀಯರದ್ದಾಗಿದೆ.

ಶಿಥಿಲಗೊಂಡ ಕಟ್ಟಡ: ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಣ್ಣ ಗಾರೆಚೂರುಗಳು ಬೀಳುತ್ತಿದ್ದು, ಶೀಘ್ರ ದುರಸ್ತಿ ಕಾಣಬೇಕಿದೆ.
ಕರೆಗೆ ಲಭ್ಯವಾಗದ ಸಿಡಿಪಿಒ: ತಾಲೂಕಿನಲ್ಲಿ 112ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ, ನೀಡುವ ಊಟ, ಮೊಟ್ಟೆ, ಅಡುಗೆ ಸಾಮಗ್ರಿ ಹಾಗೂ ಮಕ್ಕಳ ಹಾಜರಾತಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಅಂಗನವಾಡಿ ಕೇಂದ್ರದಿಂದ ಪ್ರಕಟಿಸಬೇಕಿರುವುದು ಕಡ್ಡಾಯವಾಗಿದೆ. ಈ ಎಲ್ಲ ಮಾಹಿತಿ ಸಿಡಿಪಿಒ ದಾಖಲಿಸಿಕೊಳ್ಳಬೇಕಿದೆ. ಆದರೆ ಈ ವ್ಯಾಪ್ತಿಯ ಸಿಡಿಪಿಒ ಹಲವು ದಿನಗಳಿಂದ ಅಂಗನವಾಡಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಕರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.

ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಅಂಗನವಾಡಿ ಕೇಂದ್ರ-1ರ ಸುತ್ತಲೂ, ಎತ್ತರದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಚರಂಡಿ ನೀರು ತಗ್ಗು ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನುಗ್ಗುತ್ತಿದೆ. ದುರಸ್ತಿಗೊಳಿಸಲು ಕ್ರಮವಹಿಸಲಾಗುವುದು.ಬಸವಣ್ಣಪಿಡಿಒ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net