

ಯಳಂದೂರು: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಈಗಾಗಲೇ ಶಿಕ್ಷಕರ ಭವನಕ್ಕೆ ಸ್ಥಳ ಗುರುತಿಸಿದ್ದು, ಸರ್ಕಾರಕ್ಕೆ ಅನುಮತಿ ನೀಡಿದ ಕೂಡಲೇ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ರಾಜ್ಯದಲ್ಲಿ ಶಿಕ್ಷಕರ ಹುದ್ದೆ ಹಾಗೂ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದನ್ನು ಭರ್ತಿ ಮಾಡಲು ಸರ್ಕಾರ ಹಂತಹಂತವಾಗಿ ಕ್ರಮ ವಹಿಸಲಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಎಂ. ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ 1281 ಸರ್ಕಾರಿ ಹುದ್ದೆಗಳಿದ್ದು ಇದರಲ್ಲಿ 581 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ರಾಜ್ಯ ಸರ್ಕಾರ 7ನೇ ವೇತನ ಆಯೋಗ ಜಾರಿಗೊಳಿಸಿದ್ದು, ಲಕ್ಷಾಂತರ ಸರ್ಕಾರಿ ನೌಕರರಿಗೆ ಅನುಕೂಲವಾಗಿದೆ. ಇದಕ್ಕೆ ನಾವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಕೃತಜ್ಞರಾಗಿದ್ದೇವೆ ಎಂದರು.
ಹಲವು ದಶಕಗಳಿಂದಲೂ ಪಟ್ಟಣದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಲು ನಾವು ಮನವಿ ಸಲ್ಲಿಸುತ್ತಿದ್ದೆವು. ಶಾಸಕ ಎ.ಆರ್. ಕೃಷ್ಣಮೂರ್ತಿ ಇದಕ್ಕೆ ಜಾಗ ಗುರುತು ಮಾಡಿ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಅವರಿಗೆ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಇದರೊಂದಿಗೆ ನಮಗೆ ವಸತಿ ಗೃಹಗಳ ಸಮಸ್ಯೆಯಿದ್ದು, ಪಟ್ಟಣದ ಪೊಲೀಸ್ ಕ್ವಾರ್ಟರ್ಸ್ ಹಾಗೂ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ಹೊಸದಾಗಿ ವಸತಿ ನಿವೇಶನಗಳನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ತಹಸೀಲ್ದಾರ್ ಜಯಪ್ರಕಾಶ್ ಮಾತನಾಡಿದರು. ಪಪಂ ಸದಸ್ಯರಾದ ವೈ.ಜಿ. ರಂಗನಾಥ, ಬಿ.ರವಿ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ಪ್ರಭುಪ್ರಸಾದ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಮ್ಮನಪುರ ಮಹೇಶ್, ರಾಜ್ಯ ಸಮಿತಿ ಸದಸ್ಯ ಗೋವಿಂದ ಇದ್ದರು.