

ಯಳಂದೂರು: ಹೆಣ್ಣುಮಕ್ಕಳಿಗೆ 18 ವರ್ಷ ವಯಸ್ಸಿನ ನಂತರವೇ ಮದುವೆ ಮಾಡಬೇಕು. ಆದರಿಲ್ಲಿ 18 ವರ್ಷ ವಯಸ್ಸಿನ ಯುವತಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯಳಂದೂರು ತಾಲೂಕಿನ ಗ್ರಾಮವೊಂದರ ಯುವತಿ ಅಪ್ರಾಪ್ತೆಯಾಗಿದ್ದಾಗ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದು ಪತ್ತೆಯಾಗಿದೆ. ಆ.21ರಂದು ಸಂಜೆ ಹೊಟ್ಟೆನೋವು ತಾಳಲಾರದೆ ಗ್ರಾಮವೊಂದರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು. ತಪಾಸಣೆ ಮಾಡಿದಾಗ ಹೆರಿಗೆ ನೋವೆಂದು ಗೊತ್ತಾಗಿದೆ. ಯುವತಿಗೆ ರಕ್ತದೊತ್ತಡ ಹೆಚ್ಚಾಗಿದ್ದ ಕಾರಣ ಮುಂದಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಬಳಿಕ ಅಲ್ಲಿ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನ ತೂಕ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ದೂರು ಕೊಟ್ಟ ವೈದ್ಯೆ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯುವತಿ ಬಂದಾಗ ವೈದ್ಯೆ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಯುವತಿ ಜನ್ಮ ದಿನಾಂಕ 2006 ಆ.12ರಂದು ಜನಿಸಿದ್ದು, ಈಕೆಗೆ 18 ವರ್ಷ 11 ದಿನವಾಗಿದೆ. ಆದರೆ, 8 ತಿಂಗಳ ಗರ್ಭಿಣಿಯಾಗಿರುವುದರಿಂದ ಅಪ್ರಾಪ್ತೆಯಾಗಿದ್ದಾಗ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯೆ ಯಳಂದೂರು ಪಟ್ಟಣ ಪೊಲೀಸ್ ಠಾಣೆಗೆ ಆ.22ರಂದು ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಯುವತಿಯ ಸ್ಥಿತಿಗೆ ಕಾರಣನಾದವನನ್ನು ಬಂಧಿಸಲು ಕೋರಿದ್ದಾರೆ. ಈ ಸಂಬಂಧ ಪಿಎಸ್‌ಐ ಹನುಮಂತ ಉಪ್ಪಾರ್ ನೇತೃತ್ವದ ಪೊಲೀಸರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.