

ಯಳಂದೂರು : ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಬಳಿ ನಾಟಿ ಮಾಡಲು ರೈತರು ಸಿದ್ಧಗೊಳಿಸಿಕೊಂಡಿದ್ದ ಭತ್ತದ ಗದ್ದೆಗೆ ಕಾಲುವೆಯ ನೀರು ಹರಿದು ರೈತರು ನಾಟಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 60ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತಿದ್ದು, ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.
ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಲ್ಲಹಳ್ಳಿ ಕೆರೆಯ ಬದಿಯಲ್ಲಿರುವ ಜಮೀನಿನಲ್ಲಿ ಭತ್ತ ಬೆಳೆಯಲು ನೂರಾರು ರೈತರು ಅಣಿಯಾಗಿದ್ದರು. ಉಳುಮೆ ಮಾಡಿ ಹದಗೊಳಿಸಲಾಗಿತ್ತು. ಆದರೆ, ಒಂದು ವಾರದಲ್ಲಿ ಈ ಭಾಗದಲ್ಲಿ ಸುರಿದ ಭಾರಿ ಮಳೆ ಹಾಗೂ ಕಬಿನಿ ಕಾಲುವೆಯಲ್ಲಿ ನೀರು ಹರಿಸಿದ್ದರಿಂದ ಜಮೀನಿನಲ್ಲಿ ನೀರು ನಿಂತು ಭತ್ತದ ಮಡಿ ಕೊಳೆಯಲಾರಂಭಿಸಿದೆ. ನಾಟಿ ಮಾಡಿರುವ ಗದ್ದೆಗಳಲ್ಲಿ ಕೆಲವೆಡೆ ಬೆಳೆ ಕೊಚ್ಚಿಹೋಗಿದೆ ಎಂದು ದುಗ್ಗಹಟ್ಟಿ ಗ್ರಾಮದ ಬಲ್ಲಶೆಟ್ಟಿ, ಬಿಳಿಗಿರಿ ದೂರಿದ್ದಾರೆ.
ಹೂಳೆತ್ತದಿರುವುದು ಸಮಸ್ಯೆಗೆ ಕಾರಣ
ಈ ಭಾಗದ ಜಮೀನುಗಳು ಕೆರೆ ಹಾಗೂ ಕಾಲುವೆಗಿಂತ ಕೆಳ ಭಾಗದಲ್ಲಿದೆ. ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯದೆ ತಗ್ಗು ಪ್ರದೇಶದ ಜಮೀನುಗಳಲ್ಲಿ ಹರಿಯುತ್ತಿದೆ. ಈ ಸಮಸ್ಯೆ ಪ್ರತಿವರ್ಷವೂ ಉದ್ಭವಿಸುತ್ತಿದ್ದು, ರೈತರಿಗೆ ಶಾಪವಾಗಿ ಕಾಡಿದೆ. ಕಾಲುವೆಯ ಹೂಳೆತ್ತುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಕಳೆದ ಬಾರಿ ಮಳೆ ಇಲ್ಲದೆ ವ್ಯವಸಾಯವನ್ನೇ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು, ಕಾಲುವೆಯಲ್ಲೂ ನೀರು ಹರಿಸಲಾಗಿದೆ. ಆದರೆ, ಇದು ರೈತರ ಉಪಯೋಗಕ್ಕಿಂತ ಸಮಸ್ಯೆಯೇ ಹೆಚ್ಚಾಗಿದೆ. ಕಾಲುವೆಯಲ್ಲಿ ಹೂಳು ತುಂಬಿ ನೀರು ಜಮೀನಲ್ಲಿ ಹರಿಯುತ್ತಿದ್ದು, ಪೈರು ಕೊಳೆಯಲಾರಂಭಿಸಿದೆ. ಸಂಬಂಧಪಟ್ಟವರು ಗಮನಹರಿಸಿ ಕ್ರಮವಹಿಸಬೇಕು.ಶಿವಣ್ಣಮೆಳ್ಳಹಳ್ಳಿ ರೈತ