

ಯಳಂದೂರು: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬಣ್ಣಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1983ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾಲದಲ್ಲಿ ಅಂದಿನ ಶಿಕ್ಷಣ ಮಂತ್ರಿ ಬಿ.ರಾಚಯ್ಯ ನೇತೃತ್ವದಲ್ಲಿ ಸಮಗ್ರ ಶಿಕ್ಷಣ ಮಸೂದೆ ಜಾರಿಯಾಯಿತು. ಅಂದಿನಿಂದ ಶಿಕ್ಷಣದ ದಿಕ್ಕು ಮತ್ತಷ್ಟು ಬದಲಾಯಿತು ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆ ಈಗ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಅಲಂಕರಿಸಿರುವುದಕ್ಕೆ ಇಲ್ಲಿನ ಶಿಕ್ಷಕರ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿಶ್ವಾಸವಿದೆ ಎಂದರು.
ಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ಸ್ಥಳ ಬೇಕೆಂಬ ಬಹುವರ್ಷಗಳ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಸೆ.8 ರಂದು ಪಟ್ಟಣ ಪಂಚಾಯಿತಿಯಲ್ಲಿ ಆಶ್ರಯ ಸಮಿತಿ ಸಭೆ ಕರೆದಿದ್ದು ಮುಖ್ಯಾಧಿಕಾರಿ, ಪಪಂ ಸದಸ್ಯರು ಹಾಗೂ ಆಶ್ರಯ ಸಮಿತಿ ಸದಸ್ಯರ ಜತೆ ಚರ್ಚಿಸಿ ಖಾಲಿ ನಿವೇಶನ ಗುರುತಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಎನ್. ಶಾಂತರಾಜು ಮಾತನಾಡಿ, ಅಲ್ಪಮಾನವನನ್ನು ವಿಶ್ವಮಾನವನಾಗಿ ಮಾಡುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. 1950ರಲ್ಲಿ ಶೇ. 4.5 ರಷ್ಟಿದ್ದ ಸುಶಿಕ್ಷಿತರ ಸಂಖ್ಯೆ ಪ್ರಸ್ತುತ ಶೇ.73 ರಷ್ಟು ಏರಿಕೆ ಕಂಡಿರುವುದಕ್ಕೆ ಶಿಕ್ಷಕರ ಶ್ರಮವೇ ಕಾರಣ ಎಂದರು.
ನಿವೃತ್ತಿ ಹೊಂದಿದ ಶಿಕ್ಷಕರು, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಶಿಕ್ಷಕರ ಮಕ್ಕಳು, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರ ದಿನಾಚರಣೆ ನಿಮಿತ್ತ ನಡೆದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಶಿಕ್ಷಕರನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.
ಪಪಂ ಸದಸ್ಯರಾದ ಪ್ರಭಾವತಿ, ಬಿ. ರವಿ, ಸುಶೀಲಾ, ಶಾಂತಮ್ಮ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಬಿಇಒ ಕೆ.ಕಾಂತರಾಜು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ವೀರಭದ್ರಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್, ಸರ್ಕಾರಿ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ನಂಜುಂಡಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹಾದೇವ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಲಿಂಗರಾಜು ಬಿಆರ್‌ಸಿ ರಂಗಸ್ವಾಮಿ, ಸಿಆರ್‌ಪಿ ರೇಚಣ್ಣ, ಇಸಿಒ ಶಿವಲಂಕಾರ್, ಅಮ್ಮನಪುರ ಮಹೇಶ್ ಅನೇಕರು ಹಾಜರಿದ್ದರು.