ಕಾಲುವೆ ಹೂಳು ಜಮೀನಿಗೆ

Oplus_131072
Oplus_131072
Published on

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕಾಲುವೆಯಲ್ಲಿ ಹೂಳು ತೆಗೆದು ಈ ತ್ಯಾಜ್ಯವನ್ನು ರೈತರು ವ್ಯವಸಾಯ ಮಾಡುತ್ತಿರುವ ಜಮೀನಿಗೆ ಸುರಿದಿರುವುದರಿಂದ ತೊಂದರೆ ಎದುರಾಗಿದೆ.

ಮದ್ದೂರು ಗ್ರಾಮದ ಕೆಲ ಜಮೀನುಗಳ ಬಳಿ ಹಾದು ಹೋಗಿರುವ ಕಬಿನಿ ಕಾಲುವೆಯನ್ನು ಈಚೆಗೆ ನೀರಾವರಿ ಇಲಾಖೆಯ ವತಿಯಿಂದ ಜೆಸಿಬಿಯಲ್ಲಿ ಹೂಳು ಎತ್ತಲಾಗಿದೆ. ಇಲ್ಲಿದ್ದ ಮುಳ್ಳಿನ ಗಿಡಗಳು, ಬಳ್ಳಿಗಳು ಹಾಗೂ ಪೊದೆ ಸಸ್ಯಗಳನ್ನು ಕಿತ್ತು ಪಕ್ಕದಲ್ಲಿ ಇರುವ ರೈತರ ಜಮೀನಿಗೆ ಹಾಕಲಾಗಿದೆ. ಭತ್ತವನ್ನು ಬಿತ್ತಲು ರೈತರು ಈಗಾಗಲೇ ಜಮೀನನ್ನು ಹಸನುಗೊಳಿಸುತ್ತಿದ್ದಾರೆ. ತಮ್ಮ ಜಮೀನಿಗೆ ನೀರನ್ನು ಕಟ್ಟಿದ್ದಾರೆ. ಕೆಲವೆಡೆ ಭತ್ತವನ್ನು ಪೈರು ಮಾಡಲು ಬಿತ್ತನೆ ಮಾಡಲಾಗಿದೆ. ಈಗ ಜಮೀನಿಗೆ ತ್ಯಾಜ್ಯವನ್ನು ಸುರಿದಿರುವುದರಿಂದ ವ್ಯವಸಾಯ ಮಾಡಲು ತೊಂದರೆಯಾಗುತ್ತಿದೆ.

ಕಾಲುವೆಯಲ್ಲಿ ನೀರು ಬಿಟ್ಟ ಮೇಲೆ ಇಲಾಖೆಯ ಅಧಿಕಾರಿಗಳು ಕಾಲುವೆಯನ್ನು ಶುಚಿಗೊಳಿಸುತ್ತಿರುವ ಕ್ರಮಕ್ಕೆ ಇಲ್ಲಿನ ರೈತರು ಆಕ್ರೋಶವ್ಯಕ್ತಪಡಿಸಿದ್ದಾರೆ. ಕೂಡಲೇ ಕಾಲುವೆಯ ಅಕ್ಕಪಕ್ಕದ ಜಮೀನಿನಲ್ಲಿ ಹಾಕಿರುವ ಹೂಳನ್ನು ತೆಗೆದು ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಇಲ್ಲಿನ ರೈತರಾದ ಮಂಜುನಾಥ್, ರಂಗಣ್ಣ, ಬಸವಲಿಂಗಮ್ಮ, ಸಿದ್ದನಂಜಮ್ಮ, ಪುಟ್ಟನಂಜಮ್ಮ, ಸಿದ್ದರಾಜು, ನಿಂಗರಾಜು ಸೇರಿದಂತೆ ಅನೇಕ ರೈತರು ಎಚ್ಚರಿಸಿದ್ದಾರೆ. ಜೆಸಿಬಿ ಮೂಲಕ ಕಾಲುವೆಯ ಹೂಳನ್ನು ಎತ್ತಲಾಗಿದೆ. ಕೆಲವು ರೈತರ ಜಮೀನಿನಲ್ಲಿ ಹೂಳು ಹಾಕಲಾಗಿದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಇದನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು.ರಮೇಶ್ಎಇಇ, ನೀರಾವರಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net