

ಯಳಂದೂರು: ಇದು ಡಿಜಿಟಲ್ ಯುಗವಾಗಿದ್ದು, ಅಂಗೈಯಲ್ಲೇ ಇಡೀ ಪ್ರಪಂಚವನ್ನು ಕಾಣುವ ಈ ಹೊತ್ತಿನಲ್ಲಿ ಬನ್ನಿಸಾರಿಗೆ ಗ್ರಾಮದ ಉಪ್ಪಾರ ಬಡಾವಣೆ ನಿವಾಸಿಗಳು ಶುದ್ಧ ಕುಡಿಯುವ ನೀರು ತರಲು ಪಕ್ಕದ ಗ್ರಾಮಕ್ಕೆ ತೆರಳಬೇಕಾದ ದುಸ್ಥಿತಿ ಇದೆ. ಇದರೊಂದಿಗೆ ಮೂಲ ಅವಶ್ಯಕತೆಗಳಾದ ರಸ್ತೆ, ಚರಂಡಿ, ನಿರ್ಮಾಣಕ್ಕೆ ದಶಕಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಕಸ ವಿಲೇವಾರಿ, ಬೀದಿ ದೀಪ ಸೇರಿದಂತೆ ಅನೇಕ ಮೂಲ ಸೌಕರ್ಯಗಳ ವಂಚಿತ ಬಡಾವಣೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷೃ ತೋರಿದ್ದಾರೆ.
ಕಳೆದ ಮೂರು ದಶಕಗಳಿಂದ ಬಡಾವಣೆಗಳಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಸುಮಾರು 150ಕ್ಕೂ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ಬವಡಾವಣೆಯಲ್ಲಿ ಜನರಿಗೆ ನಿತ್ಯ ನರಕಯಾತನೆಯಾಗಿದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದಕ್ಕೆ ಪೂಕರವಾಗಿ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು, ಚರಂಡಿ, ಉತ್ತಮ ರಸ್ತೆ, ಬೀದಿ ದೀಪ ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ, ಇದಕ್ಕಾಗಿ ಸರ್ಕಾರ ಅನುದಾನವನ್ನು ನೀರಿನಂತೆ ವ್ಯಯಿಸುತ್ತಿದೆ. ಆದರೆ ಉಪ್ಪಾರ ಬಡಾವಣೆಯ ಜನರು ಮಾತ್ರ ಇವುಗಳಿಂದ ಹಲವು ದಶಕಗಳಿಂದಲೂ ವಂಚಿತರಾಗಿದ್ದಾರೆ. ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ನಿವಾಸಿಗಳು ಮೌಖಿಕ ಹಾಗೂ ಲಿಖಿತವಾಗಿ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ಆರೋಪವಾಗಿದೆ.
ಕುಡಿಯುವ ನೀರಿಗಾಗಿ ಬೇರೆ ಗ್ರಾಮಕ್ಕೆ ತೆರಳಬೇಕು:
ತಾಲೂಕಿನ ಬನ್ನಿಸಾರಿಗೆ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಪ್ರತ್ಯೇಕವಾದ ಕುಡಿಯುವ ನೀರಿನ ಪೈಪ್ ಮೂಲಕ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕವನ್ನು ನಲ್ಲಿಗಳ ಮೂಲಕ ಮಾಡಿದ್ದಾರೆ. ಆದರೆ ಈ ನೀರನ್ನು ಬಡಾವಣೆಯ ಜನರು ಬಟ್ಟೆ ತೊಳೆಯಲು, ಸಾನ್ನ ಮಾಡಲು, ಪಾತ್ರೆ ತೊಳೆಯುವುದು ಸೇರಿದಂತೆ ಗೃಹೋಪಯೋಗಿ ಕೆಲಸಗಳಿಗೆ ಮಾತ್ರ ಬಳಸುತ್ತಾರೆ. ಈ ನೀರಿನಲ್ಲಿ ಕಸ, ಕಡ್ಡಿ ಸೇರಿದಂತೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಇದು ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ನೀರಿನ ಪರೀಕ್ಷೆ ಮಾಡಿಸಿಲ್ಲ, ಇದನ್ನು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಕಂಡುಬಂದಿರುವ ಪರಿಣಾಮ ಇದನ್ನು ಬಡಾವಣೆಯ ಜನರು ಬಳಸದೇ ಅಗರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಿಂದ ಹಣ ನೀಡಿ ನೀರನ್ನು ಕ್ಯಾನ್ ಮೂಲಕ ಸಂಗ್ರಹಿಸಿ ಬಳಸುವ ಪರಿಸ್ಥಿತಿ ಇದೆ ಎಂದು ಇಲ್ಲಿನ ನಿವಾಸಿ ಕುಮಾರ್ ಆರೋಪಿಸಿದ್ದಾರೆ.
ಗ್ರಾಮದ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಇಲ್ಲಿನ ರಸ್ತೆ ಸರಿಯಿಲ್ಲ, ಚರಂಡಿ ಹೂಳು ತುಂಬಿದೆ. ಕೆಲವೆಡೆ ಇದರ ನಿರ್ಮಾಣವೇ ಆಗಿಲ್ಲ. ನಲ್ಲಿಗಳಲ್ಲಿ ಬರುವ ನೀರು ಅಶುದ್ಧವಾಗಿದೆ. ಇದು ಕುಡಿಯಲು ಯೋಗ್ಯವಲ್ಲ, ಅನಿವಾರ್ಯವಾಗಿ ನಾವು ದೂರದ ಮತ್ತೊಂದು ಗ್ರಾಮದಿಂದ ಶುದ್ಧ ಕುಡಿಯುವ ನೀರಿನ್ನು ತರುವ ಅನಿವಾರ್ಯತೆ ಇದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಿ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯಿತಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲು ನಾವು ಚಿಂತನೆ ನಡೆಸಿದ್ದೇವೆ.ಲಿಂಗರಾಜು, ನಿವಾಸಿ, ಬನ್ನಿಸಾರಿಗೆ ಗ್ರಾಮ ಗೌಡಹಳ್ಳಿ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಒಳಪಡುವ ಬನ್ನಿಸಾರಿಗೆ ಗ್ರಾಮದ ಉಪ್ಪಾರ ಜನಾಂಗದ ಬಡಾವಣೆಯ ಸಮಸ್ಯೆಗಳನ್ನು ಸಂಬಂಧಪಟ್ಟ ಪಿಡಿಒಯಿಂದ ಮಾಹಿತಿ ಪಡೆದು ತಕ್ಷಣ ನಿವಾರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು.ಉಮೇಶ್, ಇಒ ತಾಪಂ, ಯಳಂದೂರು