ಯಳಂದೂರು: ಯಳಂದೂರು ಮೂಲದ ಅಮೆರಿಕದಲ್ಲಿ ನೆಲೆಸಿರುವ ನಾಟ್ಯಗುರು ಶೀಲಾ ರಾಮನಾಥ್ ಅವರ ಶಿಷ್ಯೆ ಕುಮಾರಿ ಮಾನ್ಯಾ ಮಹೇಶ್ ಆಗಸ್ಟ್ 10ರಂದು ಸಂಜೆ 5 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ಯಳಂದೂರಿನವರಾದ ಮಾನ್ಯಾಳ ತಂದೆ ಮಹೇಶ್ ಮಹಾದೇವ ಮೈಸೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ, ನಂತರ ಅಮೆರಿಕದಲ್ಲಿ ಉದ್ಯೋಗ ಪಡೆದು 24 ವರ್ಷಗಳಿಂದ ಪತ್ನಿ ಭಾಗ್ಯ ಹಾಗೂ ಇಬ್ಬರು ಪುತ್ರಿಯರೊಂದಿಗೆ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಬಹುಮುಖ ಪ್ರತಿಭೆಯಾದ ಮಾನ್ಯಾ ಅಮೆರಿಕದಲ್ಲಿ ಹುಟ್ಟಿದ್ದರೂ ಕನ್ನಡವನ್ನು ಸ್ಪಷ್ಟವಾಗಿ ಓದಲು, ಬರೆಯಲು ಕಲಿತಿದ್ದಾರೆ. ಆರು ವರ್ಷದಿಂದಲೇ ಭರತನಾಟ್ಯ ಕಲಿಯಲು ಶುರು ಮಾಡಿ, 12 ವರ್ಷಗಳ ನಿರಂತರ ಪರಿಶ್ರಮದಿಂದ ಪ್ರಸ್ತುತ ತಾಯ್ನಡಿನಲ್ಲಿ ರಂಗಪ್ರವೇಶ ಮಾಡಲಿದ್ದಾರೆ. ಇದಲ್ಲದೆ ಅಮೆರಿಕದಲ್ಲಿ ನಡೆದ ಬಾಲಿವುಡ್ ನೃತ್ಯ ಪ್ರದರ್ಶನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಅಮೆರಿಕದ ಫ್ರೀಡಂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಶಾಲೆಯಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಅಮೆರಿಕನ್ ಕ್ಯಾನ್ಸರ್ ಸೊಸೈಟಿ, ಅಮೆರಿಕನ್ ರೆಡ್‌ಕ್ರಾಸ್ ಚಾಪ್ಟರ್ಸ್ ಸಂಸ್ಥೆಗಳ ಸ್ಥಾಪಕಳಾಗಿ ಮತ್ತು ಅಧ್ಯಕ್ಷೆಯೂ ಆಗಿದ್ದಾರೆ.
ಡಿಇಸಿಎ ಬಿಜಿನೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದರ ಮೂಲಕ ತಾನು ಓದಿದ ಶಾಲೆಗೆ ಗೌರವ ತಂದು ಕೊಟ್ಟಿದ್ದಾರೆ. ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ಈ ಮೂರು ರಾಜ್ಯಗಳ ಟೀನ್ ಮಿಸ್ ಇಂಡಿಯಾ ಡಿಎವಿ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈಗ ವರ್ಜೀನಿಯ ಕಾಮನ್‌ವೆಲ್ತ್ ಯೂನಿವರ್ಸಿಟಿಯ ಪ್ರಿ-ಮೆಡಿಸಿನ್ ಟ್ರಾೃಕ್‌ನಲ್ಲಿ ಬೈಯೋಕೆಮೆಸ್ಟ್ರಿಯನ್ನು ವ್ಯಾಸಂಗ ಮಾಡುವ ಅರ್ಹತೆಯನ್ನು ಪಡೆದಿದ್ದು, ಮುಂದೆ ಕ್ಯಾನ್ಸರ್ ಗುಣಪಡಿಸುವ ವೈದ್ಯೆಯಾಗುವ ಕನಸು ಹೊಂದಿದ್ದಾರೆ. ಕಾವೇರಿ ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅದರ ಅಧ್ಯಕ್ಷರೂ ಆಗಿದ್ದರು.
ಭಾರತೀಯ ಕಲೆ ಬಗ್ಗೆ ಆಸಕ್ತಿ: ಭರತನಾಟ್ಯ ಭಾರತೀಯರ ಸನಾತನ ಸಂಸ್ಕೃತಿ ಉಳಿಸಿ, ಬೆಳೆಸುವ ಸದುದ್ದೇಶದಿಂದ ಭಾಗ್ಯ ಮಹೇಶ್ ಮತ್ತು ಮಹೇಶ್ ಮಹಾದೇವ ಅವರು ತಮ್ಮ ಇಬ್ಬರೂ ಮಕ್ಕಳನ್ನು ಭರತನಾಟ್ಯ ಕಲಾವಿದರನ್ನಾಗಿಸುವ ಕನಸು ಹೊತ್ತು ಕಾರ್ಯಪ್ರವೃತ್ತರಾದರು. ಇದಕ್ಕೆ ಅಮೆರಿಕದಲ್ಲಿ ಹೆಚ್ಚಿನ ಉತ್ತೇಜನ ಮತ್ತು ಅವಕಾಶಗಳು ದೊರೆತವು. ಹಿರಿಯ ಮಗಳಾದ ಮಾನ್ಯ ತಂದೆ-ತಾಯಿಯರ ಕನಸನ್ನು ನನಸು ಮಾಡಿದ್ದಾಳೆ.
ಅರುಣ್ ಯೋಗಿರಾಜ್ ಮುಖ್ಯ ಅತಿಥಿ: ಆಗಸ್ಟ್ 10ರಂದು ಸಂಜೆ 5 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಅಯೋಧ್ಯಾ ಶ್ರೀರಾಮ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ ಮತ್ತು ಸುಪ್ರಸಿದ್ಧ ನಾಟ್ಯಾಚಾರ್ಯ, ನಟ, ವಿದ್ವಾನ್ ಶ್ರೀಧರ್ ಜೈನ್ ಆಗಮಿಸಲಿದ್ದಾರೆ.