ಮುಖ್ಯಮಂತ್ರಿ ವಿರುದ್ಧ ರಾಜಕೀಯ ಷಡ್ಯಂತ್ರ

06 yelandur 01
Published on

ಯಳಂದೂರು: ದೇಶ ಕಂಡ ಅಪ್ಪಟ ಹಾಗೂ ಶುದ್ಧ ಹಸ್ತ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರಾಗಿದ್ದು ಇವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಇಲ್ಲಸಲ್ಲದ ಆರೋಪ ಮಾಡಿ ರಾಜಕೀಯ ಷಡ್ಯಂತ್ರ ರೂಪಿಸಿವೆ. ಇದನ್ನು ಎದುರಿಸಲು ಎಲ್ಲರೂ ಒಂದಾಗುವ ಕಾಲ ಬಂದಿದ್ದು ಆ.9 ರಂದು ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಮಾವೇಶಕ್ಕೆ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾಗಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳವಾರ ಮೈಸೂರಿನ ಜನಾಂದೋಲನ, ಬಿ.ರಾಚಯ್ಯ ಸ್ಮಾರಕ ಉದ್ಘಾಟನೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಬಿಜೆಪಿ ಇಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೆಹಲಿ, ಪಶ್ಚಿಮ ಬಂಗಾಳದಲ್ಲಿ ಈ ಪ್ರಯೋಗ ಮಾಡಿದೆ. ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲೂ ಸರ್ಕಾರಗಳನ್ನು ಅಸ್ಥಿರಗೊಳಿಸಲು ಯತ್ನ ನಡೆಸಿದೆ ಎಂದು ಆರೋಪಿಸಿದರು.

ಯಾವುದೇ ಕಳಂಕವಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣ ನೆಪವೊಡ್ಡಿ ರಾಜ್ಯಪಾಲರ ಅಧಿಕಾರ ದುರುಪಯೋಗ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ಅರಿವಾಗುತ್ತಿಲ್ಲ. ಮುಡಾದಲ್ಲಿ ಯಾವುದೇ ಹಗರಣವಾಗಿಲ್ಲ. ವಾಮಮಾರ್ಗದಲ್ಲಿ ಮುಖ್ಯಮಂತ್ರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ಮಾತನಾಡುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದು ಇವರನ್ನು ಕಂಡರೆ ಬಿಜೆಪಿಯವರಿಗೆ ಭಯವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಅನೇಕ ಹಗರಣಗಳು ನಡೆದಿವೆ. ಈ ಬಗ್ಗೆ 21 ಹಗರಣಗಳ ಬಗ್ಗೆ ದಾಖಲೆಗಳನ್ನು ಸದನದಲ್ಲಿ ಬಿಡುಗಡಡೆ ಮಾಡಲಾಗಿದೆ. ಇಂತಹ ಪಿತೂರಿ ನಡೆಸುತ್ತಿರುವ ಬಿಜೆಪಿಗರ ವಿರುದ್ಧ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆ.9ರಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ. ನಮ್ಮ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಮನಿತ ವರ್ಗಗಳ ಧ್ವನಿಯಾಗಿರುವ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಾವು ನಿಲ್ಲಬೇಕಿದೆ ಎಂದು ಹೇಳಿದರು.

ಆ.10ರಂದು ಆಲೂರು ಗ್ರಾಮದಲ್ಲಿ ನಮ್ಮ ತಂದೆ ದಿ.ಬಿ.ರಾಚಯ್ಯ ಅವರ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ. ಪ್ರಥಮ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ.ಅನುದಾನ ನೀಡಿದ್ದರು. ಈಗ ಅವರೇ ಚಾಲನೆ ನೀಡುತ್ತಿದ್ದಾರೆ ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಸದಸ್ಯರಾದ ವಡಗೆರೆ ದಾಸ್, ಕೇತಮ್ಮ, ಮಂಗಲ ಶಿವಕುಮಾರ್ ಮಾತನಾಡಿದರು. ಕಪ್ಪಾಳಿ ಮಹದೇವನಾಯಕ, ಕಿನಕಹಳ್ಳಿ ರಾಚಯ್ಯ, ಬಾಗಳಿ ರೇವಣ್ಣ, ಪಪಂ ಸದಸ್ಯ ಮಹೇಶ್, ಚಾಮುಲ್ ನಿರ್ದೇಶಕ ರೇವಣ್ಣ, ನಂಜುಂಡಸ್ವಾಮಿ, ಭಾಯಾ, ಜಿ.ಎನ್.ಲೋಕೇಶ್, ಕಮಲ್ ನಾಗರಾಜು, ಚೇತನ್ ದೊರೆರಾಜ್, ಜಯರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net