ಸಭೆಗೆ ಸರಿಯಾದ ಮಾಹಿತಿ ನೀಡದಿದ್ದರೆ ಕ್ರಮ

11 yelandur 01
Published on

ಯಳಂದೂರು: ಪಟ್ಟಣ ಪಂಚಾಯಿತಿಗೆ ಆದಾಯ ತರುವ ಮೂಲಗಳು, ಇದುವರೆಗೆ ಬಂದಿರುವ ಅನುದಾನಗಳ ಬಳಕೆ, ಇದರ ನಿರ್ವಹಣೆ ಸೇರಿದಂತೆ ವಿವಿಧ ದಾಖಲೆಗಳನ್ನು ಮುಂದಿನ ಸಭೆಯತನಕ ಸರಿಯಾಗಿ ನೀಡದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಳಂದೂರು ಪಟ್ಟಣ ಚಿಕ್ಕದಾಗಿದೆ. ಇಲ್ಲಿ ಆದಾಯದ ಮೂಲಗಳು ಕಡಿಮೆ ಇದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳ ಸಹಯೋಗದಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಕಂದಾಯ ಸೇರಿದಂತೆ ಪಂಚಾಯಿತಿಗೆ ಆದಾಯ ತರುವ ಇತರ ವಸೂಲಾತಿಗಳನ್ನು ಕಡ್ಡಾಯವಾಗಿ ಮಾಡಬೇಕು. ಆದಾಯದ ಮೂಲದ ಬಗ್ಗೆ ಇಲ್ಲಿ ಮಾಹಿತಿಯ ಕೊರತೆ ಇದ್ದು, ಮುಂದಿನ ಸಭೆಯ ತನಕ ಇದನ್ನು ನೀಡಬೇಕು ಎಂದು ಗುಡುಗಿದರು.

ನಿಖರ ಮಾಹಿತಿ ನೀಡಿ: ಉತ್ತಂಬಳ್ಳಿ ಬಳಿ ಇರುವ, ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡುವ ಘಟಕದಲ್ಲಿ ಮೋಟಾರ್ ರಿಪೇರಿ ಸೇರಿದಂತೆ ಇತರ ನಿರ್ವಹಣೆಗಾಗಿ ಇದುವರೆವಿಗೆ 29 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೂ ನಿಯಮಿತವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲದೆ ಪದೇ ಪದೆ ಇಲ್ಲಿನ ಪರಿಕರಗಳು ನಿರ್ವಹಣೆ ಇಲ್ಲದೆ ಕೆಟ್ಟು ಹೋಗುತ್ತಿದ್ದು, ಈ ಹಣ ಪೋಲಾಗುತ್ತಿದೆ. ಈ ಬಗ್ಗೆ ಕೂಡಲೇ ಎಚ್ಚರಿಕೆ ವಹಿಸಬೇಕು. ಈ ಹಣ ಯಾವುದಕ್ಕೆ ವ್ಯಯವಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನಗರ ನೀರು ಸರಬರಾಜು ಇಲಾಖೆ ಎಇಇ ಚಿನ್ನಸ್ವಾಮಿ, ಎಇ ಉಮೇಶ್‌ಗೆ ಎಚ್ಚರಿಕೆ ನೀಡಿದರು.

ನೈರ್ಮಲ್ಯ ಕಾಪಾಡಿ
ಇಲ್ಲಿನ ಆಹಾರ ನಿರೀಕ್ಷಕರು ವಾರ್ಡ್‌ಗಳಿಗೆ ಭೇಟಿ ನೀಡುತ್ತಿಲ್ಲ. ಇಲ್ಲಿ ಕಸದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಇದರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ಎಲ್ಲ ಸದಸ್ಯರು ಒಕ್ಕೊರಲಿನಿಂದ ದೂರಿದರು. ಇದಕ್ಕೆ ಶಾಸಕರು ಪ್ರತಿನಿತ್ಯ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರು ಬಂದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಪಟ್ಟಣದಲ್ಲಿ ಕಾವೇರಿ ಕುಡಿಯುವ ನೀರಿನ ಟ್ಯಾಂಕ್‌ಗೆ ನಗರೋತ್ಥಾನ ಯೋಜನೆಯಡಿ 75 ಲಕ್ಷ ರೂ. ಬಿಡುಗಡೆಯಾಗಿದೆ ಆದರೆ ಟ್ಯಾಂಕ್ ಮಾಡಿ ಇದಕ್ಕೆ ಇನ್ನೂ ಸಂಪರ್ಕ ಕಲ್ಪಿಸಿಲ್ಲ. ಅಲ್ಲದೆ ಕುಂಬಾರಗುಂಡಿಯಲ್ಲಿನ ರಸ್ತೆ ಹಾಗೂ ಡೆಕ್‌ನಲ್ಲಿ ಕಬ್ಬಿಣದ ಸರಳುಗಳು ಕಾಣಿಸುತ್ತಿದ್ದು, ಇದನ್ನು ದುರಸ್ತಿ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಸಮಸ್ಯೆ ಆದಷ್ಟು ಬೇಗ ನೀಗಿಸುವಂತೆ ಜೆಇ ನಾಗೇಂದ್ರವರಿಗೆ ಸೂಚನೆ ನೀಡಿದರು.
ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹದೇವನಾಯಕ, ಮಂಜು, ಕೆ.ಮಲ್ಲಯ್ಯ, ಪ್ರಭಾವತಿ, ಬಿ.ರವಿ, ಲಕ್ಷ್ಮೀ, ಸುಶೀಲಾ, ಶಾಂತಮ್ಮ ಮುಖ್ಯಾಧಿಕಾರಿ ರವಿಕೀರ್ತಿ, ಆಹಾರ ನಿರೀಕ್ಷಕ ಸುಬ್ರಹ್ಮಣ್ಯ, ಲಕ್ಷ್ಮೀ, ಜಯಲಕ್ಷ್ಮೀ, ರೇಖಾ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net