ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ ಚರಂಡಿ

11 yelandur 03
Published on

ಯಳಂದೂರು: ಚರಂಡಿಯಿಲ್ಲದೆ ರಸ್ತೆಯಲ್ಲೇ ಮಡುಗಟ್ಟಿ ನಿಂತಿರುವ ಕಲುಷಿತ ನೀರು, ಸೊಳ್ಳೆಗಳ ಹಿಂಡು, ಮಳೆ ಬಂದರೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಕಲುಷಿತ ನೀರು, ಹಳ್ಳ ಬಿದ್ದ ರಸ್ತೆಗಳಲ್ಲಿ ಸಾಗುವ ಅನಿವಾರ್ಯತೆ, ಕಲುಷಿತ ನೀರಿನ ಚರಂಡಿಯ ಮೇಲೆ ಹಾದು ಹೋಗಿರುವ ಕುಡಿಯುವ ನೀರಿನ ಒಡೆದು ಹೋಗಿರುವ ಪೈಪು..!

ಇದು ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಂದಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಸ್ಥಿತಿಗತಿ, ಈ ಬಡಾವಣೆಯಿಂದ ಅಂಬಳೆ ಗ್ರಾಮದ ಚಾಮುಂಡೇಶ್ವರಿ ದೇಗುಲಕ್ಕೆ ಸಾಗುವ ಪ್ರಮುಖ ರಸ್ತೆಯಲ್ಲಿರುವ ಈ ಬೀದಿಯಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಇದ್ದ ಹಳೇ ಚರಂಡಿ ಮುಚ್ಚಿ ಹೋಗಿದ್ದು ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದ ಕಚ್ಚಾ ರಸ್ತೆಯಾಗಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ಬಂದರೆ ಇಲ್ಲಿನ ಚರಂಡಿಯ ನೀರು ಮನೆಗಳಿಗೆ ನುಗ್ಗುತ್ತದೆ. ಇಲ್ಲಿರುವ ಅನೇಕ ಮನೆಗಳು ಕಚ್ಚಾ ಮನೆಗಳಾಗಿದ್ದು ಅನೇಕ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ಇಲ್ಲಿ ಚರಂಡಿ, ರಸ್ತೆ ನಿರ್ಮಿಸಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂದು ನಿವಾಸಿ ಪುಟ್ಟನಂಜಮ್ಮ ದೂರಿದರು.

ನಮ್ಮ ಬಡಾವಣೆಯಲ್ಲಿ ಚರಂಡಿ ನಿರ್ಮಿಸುವಂತೆ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ಹಾಗೂ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇಲ್ಲಿ ಸೊಳ್ಳೆ, ಕ್ರಿಮಿಕೀಟಗಳ ಆವಾಸ ಹೆಚ್ಚಾಗಿದೆ. ಈಗ ಮಳೆಗಾಲವಾಗಿದ್ದು ಮಲೇರಿಯಾ, ಡೆಂೆ ಹರಡುವ ಭೀತಿ ಇದೆ. ಈ ಸಮಯದಲ್ಲಾದರೂ ನಮ್ಮ ರಸ್ತೆಯನ್ನು ಶುಚಿಯಾಗಿಡಲು ಸ್ಥಳೀಯ ಆಡಳಿತ ಗಮನ ಹರಿಸಬೇಕು. ಇಲ್ಲಿನ ರಸ್ತೆಯು ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇಗುಲಕ್ಕೆ ಸಾಗುವ ರಸ್ತೆಯಾಗಿದ್ದು ದಿನನಿತ್ಯ ಹಲರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆ ತುಂಬೆಲ್ಲ ಹಳ್ಳಕೊಳ್ಳಗಳು ಬಿದ್ದಿವೆ. ಮಣ್ಣಿನ ಕಚ್ಚಾ ರಸ್ತೆಯಾಗಿದ್ದು ಮಳೆ ಬಂದರೆ ವಾಹನ ಚಾಲನೆ ಕಷ್ಟವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಿ ಇಲ್ಲಿನ ವಾಸಿಗಳ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net