

ಯಳಂದೂರು: ಪುರಾಣಿ ಪೋಡಿನಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಅವರು ಬುಧವಾರ ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಮತ್ತು ಪುರಾಣಿ ಪೋಡಿಗೆ ಭೇಟಿ ನೀಡಿದ ಸಂದರ್ಭ ಮಹಿಳೆಯರಿಗೆ ದೊರಕುತ್ತಿರುವ ಸೌಲಭ್ಯಗಳ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಹಿಳೆಯರ ದೂರು: ಆರೋಗ್ಯ ಇಲಾಖೆ ವತಿಯಿಂದ ನಮಗೆ ಯಾವುದೇ ತಪಾಸಣೆ ನಡೆಸುತ್ತಿಲ್ಲ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸವನ್ನು ನೀಡುತ್ತಿಲ್ಲ. ಜಾಬ್ ಕಾರ್ಡ್ ಮಾಡಿಸಿದ್ದರೂ ನಮಗೆ ಕೆಲಸವಿಲ್ಲ. ನಾವು ಮಳೆ ನಂಬಿ ಬದುಕುವ ಜನರಾಗಿದ್ದೇವೆ. ನಮ್ಮಲ್ಲಿ ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಪುರಾಣಿ ಪೋಡಿನ ಮಹಿಳೆಯರು ನಾಗಲಕ್ಷ್ಮೀ ಚೌಧರಿ ಅವರಿಗೆ ಸಂಕಷ್ಟಗಳನ್ನು ಹೇಳಿಕೊಂಡರು. ನಮಗೆ ವಿದ್ಯುತ್ ಸಂಪರ್ಕವಿಲ್ಲ, ಕುಡಿಯುವ ನೀರು ಇಲ್ಲ, ಇದ್ದ ಕೆಲವು ಕೈಪಂಪುಗಳಲ್ಲಿ ನೀರು ಬರುತ್ತಿಲ್ಲ. ಇಲ್ಲಿ ಹಾಕಲಾಗಿದ್ದು ಸೋಲಾರ್ ವಿದ್ಯುತ್ ದೀಪಗಳು ಕೆಟ್ಟು 3 ವರ್ಷವೇ ಕಳೆದಿದೆ. ಇದನ್ನು ದುರಸ್ತಿ ಮಾಡಿಲ್ಲ. ನಮಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಮನೆಗಳನ್ನು ನೀಡಿಲ್ಲ, ನಮ್ಮ ಮನೆಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ವಾಸಿಸುವ ಸ್ಥಿತಿ ಇದೆ. ಇಲ್ಲಿ ಮೂಲಸೌಲಭ್ಯವಿಲ್ಲದೆ ನಮಗೆ ಕಷ್ಟವಾಗಿದೆ ಎಂದು ನಿವಾಸಿಗಳು ದೂರಿದರು.
ಆಶ್ರಮ ಶಾಲೆಯಲ್ಲಿ ಹಾಲು ನೀಡುತ್ತಿಲ್ಲ:
ಪುರಾಣಿ ಪೋಡಿನ ಗಿರಿಜನ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಊಟದ ಮೆನುವಿನಲ್ಲಿ ದಿನನಿತ್ಯ ಹಾಲಿನೊಂದಿಗೆ ಹಾರ್ಲಿಕ್ಸ್, ಬೂಸ್ಟ್, ಬಾದಾಮಿ ಹಾಲು ನೀಡಬೇಕು ಎಂಬ ನಿಯಮವಿದೆ. ಆದರೆ ಹಾಲೇ ನೀಡುತ್ತಿಲ್ಲ ಎಂಬ ದೂರು ಕೇಳಿದ ನಾಗಲಕ್ಷ್ಮೀ ಚೌಧರಿ ಕೆಂಡಾಮಂಡಲವಾದರು. ಶಾಲೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಅಧಿಕಾರಿ ಕೇಶವಮೂರ್ತಿ, ನಿಲಯ ಪಾಲಕ ಬೊಮ್ಮಯ್ಯ ಅವರನ್ನು ಚೌಧರಿ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಕ್ಷೀರ ಕ್ರಾಂತಿಯಾಗುತ್ತಿದೆ. ನಿತ್ಯ ಶಾಲಾ ಮಕ್ಕಳಿಗೆ ಹಾಲು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ ವಸತಿ ಶಾಲೆಯ, ಕಾಡಂಚಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಕೋಟ್ಯಂತರ ರೂ. ಬಳಕೆ ಮಾಡುತ್ತಿದೆ. ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ನಂತರ ಅಂಗನವಾಡಿ ಕೇಂದ್ರ, ಸೋಲಿಗ ಜನಾಂಗದ ಮನೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಾಗಲಕ್ಷ್ಮೀ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ತಹಸೀಲ್ದಾರ್ ಜಯಪ್ರಕಾಶ್, ಸಿಡಿಪಿಒ ಸಕಲೇಶ್ವರ, ರಾಜಸ್ವ ನಿರೀಕ್ಷಕ ಯದುಗಿರಿ, ಪಿಡಿಒ ಕಾವ್ಯಾ ಇದ್ದರು.