

ಯಳಂದೂರು: ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ಜಿ.ಎಂ.ಮಹದೇವಪ್ಪ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಕಾರಾಪುರ ವಿರಕ್ತ ಮಠದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿ.ಎಂ. ಮಹದೇವಪ್ಪ ಹೊರತುಪಡಿಸಿ ಬೇರೆ ಯಾರೂ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಎಸ್.ಸಿದ್ದಲಿಂಗಸ್ವಾಮಿ ಇವರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಮಹದೇವಪ್ಪ ಮಾತನಾಡಿ, ಮಹಾಸಭಾದ ನಿಯಮಗಳಿಗನುಸಾರವಾಗಿ ಜನಸಾಮಾನ್ಯರ ಸೇವೆ ಮಾಡಿ, ಸಮಾಜದಲ್ಲಿ ಶಿಕ್ಷಣ, ಸಂಘಟನೆ ಅಭಿವೃದ್ಧಿಗೆ ಆದ್ಯತೆ ನೀಡಿ ನಮ್ಮ ತಾಲೂಕು ಸಂಘವನ್ನು ಉತ್ತವಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲ ಸದಸ್ಯರು, ನಿರ್ದೇಶಕರ ಸಹಯೋಗದೊಂದಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು. ಸಂಘದ ನಿರ್ದೇಶಕರಾಗಿ ವಿ.ರಮೇಶ್, ರೇವಣ್ಣ, ಎಂ.ಮಂಜು, ಎಸ್.ನಾಗಪ್ಪ, ಎಸ್. ಮಹದೇವಸ್ವಾಮಿ, ಬಿ.ಪಿ. ನಾಗೇಂದ್ರಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ವೀರಶೈವ ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.